Index   ವಚನ - 326    Search  
 
ಗುರುಸ್ಥಲ ಲಿಂಗಸ್ಥಲ ಜಂಗಮಸ್ಥಲ. ಈ ತ್ರಿವಿಧಭೇದವ ವಿವರಿಸಿ ಹೇಳೆಹೆ ಕೇಳಿರಣ್ಣಾ. ಗುರುಸ್ಥಲ ವೇದಾಂತ, ಲಿಂಗಸ್ಥಲ ಸಿದ್ಧಾಂತ, ಜಂಗಮಸ್ಥಲ ಪ್ರಸಿದ್ಧಾಂತ. ಇಂತೀ ತ್ರಿವಿಧಭೇದ ಐಕ್ಯವಹ ತೆರ ಸಮರ್ಪಣವೆಂತಾದುದಣ್ಣಾ ? ಗುರುಸ್ಥಲ ಸಂಗನಬಸವಣ್ಣನಾದ, ಲಿಂಗಸ್ಥಲ ಚೆನ್ನಬಸವಣ್ಣನಾದ. ಜಂಗಮಸ್ಥಲ ಪ್ರಭುವಾಗಿ ಬಂದ. ಬಂದ ಅಂದವ ತಿಳಿದು ನೋಡು. ಗುರುಲಿಂಗಜಂಗಮವೆಂಬ ಸಂದೇಹದಲ್ಲಿ ನಿಂದು, ಆನಂದಿಸುತ್ತಿರ್ಪ ಭಾವದ ಬಳಲಿಕೆಯ ಅಣ್ಣಗಳು ಕೇಳಿರೊ. ಕಾಯ ಬಸವಣ್ಣನಾದ, ಜೀವ [ಚೆನ್ನ]ಬಸವಣ್ಣನಾದ. ಅದರ ಅರಿವು ಕಳೆ ಪರಿಪೂರ್ಣ ಪರಂಜ್ಯೋತಿ ಪ್ರಭುವಾದ. ಇಂತೀ ತ್ರಿವಿಧಭೇದವ ಕೊಟ್ಟು ಬಂದು, ಭಕ್ತಿ ಮುಕ್ತಿ ವಿರಕ್ತಿಯಿಂದ ಮಹಾಮನೆಯಲ್ಲಿ ಮಾಡಿ ಕೆಟ್ಟ ಬಸವಣ್ಣ. ಹೇಳಿ ಕೆಟ್ಟ ಚೆನ್ನಬಸವಣ್ಣ, ಉಂಡೆಹೆನೆಂದು ಗರ್ವದಲ್ಲಿ ಕುಳಿತು ಕೆಟ್ಟ ಪ್ರಭುದೇವರು. ಅಂತುಕದಲ್ಲಿರ್ದ ಸಂಗನಬಸವಣ್ಣ, ಸಂಕಲ್ಪದಲ್ಲಿರ್ದ ಚೆನ್ನಬಸವಣ್ಣ. ಸಂದೇಹದಂಗವ ತಾಳಿರ್ದ ಪ್ರಭುದೇವರು. ಇಂತಿವರಂಗದಲ್ಲಿ ಲಿಂಗವುಂಟೆಂಬೆನೆ, ಜ್ಞಾನಕ್ಕೆ ದೂರ. ಇಲ್ಲವೆಂಬೆನೆ ಸಮಯಕ್ಕೆ ದೂರ. ಇಂತೀ ಉಭಯದ ಸಂದನಳಿದರೆಂಬೆನೆ, ಪ್ರಭು ಸಂದೇಹಿಯಾದ. ಇವರೆಲ್ಲರೂ ಅಡುವ ಲಂದಣಗಿತ್ತಿಯ ಮನೆಯ ಉಂಬಳಿಕಾರರಾದರು. ಇದು ಸಂದೇಹವಿಲ್ಲ. ಗುರುವೆಂದಡೆ ಸರ್ವರಿಗೆ ಬೋಧೆಯ ಹೇಳಿ, ಕರ್ಮಕಾಂಡಿಯಾದ. ಲಿಂಗವೆಂದಡೆ ಯುಗಯುಗಂಗಳಿಗೊಳಗಾದ, ಪ್ರಳಯಕ್ಕರುಹನಾದ. ಪ್ರಭುದೇವರು ಜಂಗಮವೆಂಬೆನೆ ಗೆಲ್ಲ ಸೋಲಕ್ಕೆ ಹೋರಿ, ಕಾಯದೊಳು ನಾನಿಲ್ಲವೆಂದು ಚೌವಟಗೊಳಗಾದ. ಎಲ್ಲಿಯೂ ಕಾಣೆ, ಲೀಲೆಗೆ ಹೊರಗಾದವನ. ಭಕ್ತಿ ಮುಕ್ತಿ ವಿರಕ್ತಿ ಲೇಪವಾಗಿ, ನಾನೆನ್ನದೆ ಇದಿರೆನ್ನದೆ, ಜಗದಲ್ಲಿ ತಾನೇನೂ ಎನ್ನದಿರ್ಪುದೆ ತ್ರಿವಿಧ ಸಮರ್ಪಣ ಆಚಾರ. ಭಾವರಹಿತ ವಿಕಾರ, ನಿರುತ ಪರಿಪೂರ್ಣನಾದೆಯಲ್ಲಾ, ನಿಃಕಳಂಕ ಮಲ್ಲಿಕಾರ್ಜುನಾ.