Index   ವಚನ - 344    Search  
 
ಚೇತನವಳಿದು ಅಚೇತನವಸ್ತು ರೂಪಾಗಿ ಬಂದಿತ್ತದೇತಕ್ಕೆ ಎಂಬುದು ತಿಳಿದು, ಬಂಗಾರವ ಕಳೆದು ಬಣ್ಣವ ನೋಡಬಾರದು. ಕುಸುಮವ ಕಳೆದು ಗಂಧವ ಕಾಣಬಾರದು. ದರ್ಪಣದ ಘಟವ ಕಳೆದು ನೋಡಲಿಕ್ಕೆ ಪ್ರತಿಬಿಂಬಿಸುವುದೆ ? ಅಂಗವ ಕಳೆದು ಲಿಂಗವನರಿಯಬಾರದು. ಲಿಂಗವ ಕಳೆದು ಆತ್ಮನನರಿವ ಪರಿಯಿನ್ನೆಂತೊ ? ಆತ್ಮನ ಚೇತನವ ಬಿಟ್ಟು ಹಿತಜ್ಞಾನವರಿಯಬೇಕೆಂಬ ಅಜಾತರು ಕೇಳಿರೊ. ಅಂಗವ ಕಳೆದು ಲಿಂಗವ ಕಂಡೆನೆಂಬುದು, ಲಿಂಗವಳಿದು ಆತ್ಮನನರಿದೆನೆಂಬುದು, ಆತ್ಮನಳಿದು ಅರಿವನರಿದೆನೆಂಬುದು, ಅದೇತರ ಪರಿ ಹೇಳಾ. ತೃಷೆಯರತು ನೀರ ಕೊಳಬಹುದೆ ? ಆಪ್ಯಾಯನವನರತು ಓಗರವನುಣಬಹುದೆ ? ಸತ್ಕ್ರೀಯಿಲ್ಲದೆ ಲಿಂಗವನರಿಯಬಹುದೆ ? ಆ ಲಿಂಗಕ್ಕೆ ಅರ್ಚನೆ ಪೂಜನೆ ಹೀನವಾಗಿ ವಸ್ತುವನರಿತೆನೆಂಬ ನಿಶ್ಚಿಯವಂತರು ನೀವೇ ಬಲ್ಲಿರಿ, ನಿಃಕಳಂಕ ಮಲ್ಲಿಕಾರ್ಜುನಾ.