Index   ವಚನ - 352    Search  
 
ಜಪವೇಕೊ ಅಪ್ರಮಾಣಂಗೆ ? ತಪವೇಕೊ ಚತುರ್ವಿಧಪ[ಥ]ಕ್ಕೆ ಹೊರಗಾದಾತಂಗೆ ? ನೇಮವೇಕೊ ನಿತ್ಯತೃಪ್ತಂಗೆ ? ನಿತ್ಯವೇಕೊ ಅಷ್ಟವಿಧಾರ್ಚನೆ ಷೋಡಶೋಪಚಾರಭರಿತಂಗೆ ? ಜಪಕ್ಕೊಳಗಾದ ರುದ್ರ, ತಪಕ್ಕೊಳಗಾದ ವಿಷ್ಣು, ನೇಮಕ್ಕೊಳಗಾದ ಬ್ರಹ್ಮ, ನಿತ್ಯಕ್ಕೊಳಗಾದ ಈಶ್ವರ, ಉಪಚರಣೆಗೊಳಗಾದ ಸದಾಶಿವ. ಇಂತಿವರೆಲ್ಲರೂ ಸೃಷ್ಟಿಯ ಮೇಲಣ ತಪ್ಪಲಿಲ್ಲಿರ್ದರೇಕೆ, ಎಲ್ಲಾ ಬೆಟ್ಟವನೇರಿ ? ಇಂತಿವರ ಬಟ್ಟೆಯ ಮೆಟ್ಟದೆ ನಿಶ್ಚಯವಾದ ಶರಣ, ಇಹದವನಲ್ಲ, ಪರದವನಲ್ಲ. ಆ ಶರಣ ಉಡುವಲ್ಲಿಯೂ ತಾನೆ, ತೊಡುವಲ್ಲಿಯೂ ತಾನೆ, ಕೊಡುವಲ್ಲಿಯೂ ತಾನೆ, ಮುಟ್ಟುವಲ್ಲಿಯೂ ತಾನೆ, ತಟ್ಟುವಲ್ಲಿಯೂ ತಾನೆ ಬೇರೊಂದಿಲ್ಲವಾಗಿ. ಕ್ಷೀರವ ಕೂಡಿದ ಜಲವ ಭೇದಿಸಬಹುದೆ ಅಯ್ಯಾ ? ವಾರಿಧಿಯ ಕೂಡಿದ ಸಾರವ ಬೇರೆ ರುಚಿಸಲುಂಟೆ ಅಯ್ಯಾ ? ಆರಡಿ ಕೊಂಡ ಗಂಧವ ಬೇರು ಮಾಡಿ ಮುಡಿಯಲಿಲ್ಲ. ತೋರಲಿಲ್ಲದ ರೂಪಿಂಗೆ ಆರಾಧಿಸುವುದಕ್ಕೆ ಬೇರೆ ಒಡಲಿಲ್ಲ. ಸಾಕಾರಕ್ಕೆ ಆರೈಕೆಯಿಲ್ಲದೆ ಸತ್ತು ರೂಪಾದಲ್ಲಿಯೆ, ಇ[ಹದ]ಲ್ಲಿ ಪರದಲ್ಲಿ ಪರಿಣಾಮಿಗಳಾಗಲಿ, ಇಂತಿವಕ್ಕೆ ದೂರವಾಗಿ ಬಾಳುಗೆಟ್ಟು ಜಾಳಾದೆ, ಹೇಳಹೆಸರಿಲ್ಲದಂತಾದೆನಯ್ಯಾ, ನಿಃಕಳಂಕ ಮಲ್ಲಿಕಾರ್ಜುನಾ.