Index   ವಚನ - 369    Search  
 
ತತ್ವಬ್ರಹ್ಮವನರಿವ ಹಿರಿಯರೆಲ್ಲರೂ ಕ್ಷುತ್ತಿನ ಸುಖವ ಮೆಚ್ಚಿ, ಇಚ್ಫೆಯ ನುಡಿವುತ್ತಿಪ್ಪರು ನೋಡಾ. ಚಿತ್ತವನರಿದಲ್ಲಿ ಕುಚಿತ್ತ ಬೋಧೆಯ ಹೇಳಲಾಗದು. ಆಳಾಗಿರ್ದು ಅರಸಾಗಬಹುದಲ್ಲದೆ, ಅರಸಾಗಿರ್ದು ಆಳಾಗಬಾರದು. ರೂಪಾಗಿರ್ದು ನಿರೂಪಾಗಬಹುದಲ್ಲದೆ, ನಿರೂಪಾಗಿರ್ದು ರೂಪಾಗಬಾರದು. ಇದು ಕಾರಣ, ನಾ ಸತ್ತೆನೆಂಬ ಹೆಣವಿಲ್ಲವಾಗಿ, ನಾ, ನೀನೆಂಬ ಉಭಯವ ಹಿಂಗಿಯಲ್ಲದೆ, ಪರಿಪೂರ್ಣವಾಗಬಾರದು, ನಿಃಕಳಂಕ ಮಲ್ಲಿಕಾರ್ಜುನಾ.