Index   ವಚನ - 407    Search  
 
ತ್ರಿಭುವನದಗ್ರದಲ್ಲಿ ಮೂವತ್ತಾರು ಲೋಕ. ಅದರ ಮಧ್ಯದಲ್ಲಿ ಇಪ್ಪತ್ತೈದು ಮಹಾಮೇರುವೆ. ಹದಿನಾರು ವರ್ತನದ ಕೊಂಡಿಗರು. ಲಘುವೆಂಬ ತಾರುಗದ, ಅದಕ್ಕೆ ಅಗುಳಿ ದಿವಾರಾತ್ರಿಯೆಂಬವೆರಡು. ಅಗುಳಿಯ ಸನ್ನರ್ಧವಾಗಿ ಬಲಿದವನ ನೋಡಾ. ಅವನ ನಖದ ಕೊನೆಯಲ್ಲಿ ಲಕ್ಷ ಅಲಕ್ಷವೆಂಬ ಭೇದ. ಆ ಭೇದವೆಂಬ, ಜರನಿರ್ಜರವೆಂಬ, ಅಹುದಲ್ಲವೆಂಬ, ಆಗುಚೇಗೆಯೆಂಬ, ಶಂಕೆ ಸಂತೋಷವೆಂಬ, ಕಾಂಕ್ಷೆ ನಿಃಕಾಂಕ್ಷೆಯೆಂಬ, ಜೀವ ಪರಮವೆಂಬ ಇಂತೀ ದ್ವಂದ್ವಂಗಳೆಲ್ಲ ದ್ವಾರಸಂಚಾರಕ್ಕವಧಿಯಾದವು. ಇದಕ್ಕಿಂದ ಮುನ್ನವೆ ಭುವನ ಕೆಟ್ಟಿತ್ತು. ಕೋಟೆ ಕೋಳು ಹೋಯಿತ್ತು, ಹಿರಿಯರಸು ಸಿಕ್ಕಿದ, ಪ್ರಧಾನನ ತಲೆ ಹೋಯಿತ್ತು, ತಳವಾರನ ಕಣ್ಣು ಕಳೆಯಿತ್ತು. ಎಕ್ಕಟಿಗನ ಮಕ್ಕಳೆಲ್ಲರೂ ನಷ್ಟಸಂತಾನವಾದರು. ಸೃಷ್ಟಿಯೊಳಗೆಲ್ಲ ರಣಮಯವಾಯಿತ್ತು. ರಣಮಧ್ಯದಲ್ಲೊಂದು ವೃಕ್ಷವ ಕಂಡೆ, ಸತ್ತವನಿರ್ದ, ಇರ್ದವಸತ್ತ. ಇವರಿಬ್ಬರ ಮಧ್ಯದಲ್ಲೊಂದು ವೃಕ್ಷವ ಕಂಡೆ, ನಿಃಕಳಂಕ ಮಲ್ಲಿಕಾರ್ಜುನಾ.