Index   ವಚನ - 431    Search  
 
ನಾನಾ ಚಿಹ್ನವಿಚ್ಫಿಹ್ನಂಗಳು ತಲೆದೋರದೆ, ನಾನಾ ವೇಷ ಪಾಶ ರೋಷದೋಷ ನಾಶವಾಗಿ, ವಿಮಲಾಂಗವಾಗಿಪ್ಪುದು ಶಿವಲಿಂಗಸ್ಥಲ. ಫಲಭೋಗಭೋಜ್ಯಂಗಳು ನಿವೃತ್ತಿಯಾಗಿ, ಕಾಮ ಲೋಭ ಮೋಹ ಮದ ಮತ್ಸರಂಗಳಲ್ಲಿ ನಿರತನಾಗಿ, ಹಸಿವು ಕ್ರೋಧ ತೃಷೆ ವ್ಯಸನಂಗಳಲ್ಲಿ ಅಲಕ್ಷಿತನಾಗಿ, ಪಾಶಬದ್ಧ ವಿರಹಿತನಾಗಿ, ಗುಣ ಅವಗುಣವ ವಿಚಾರಿಸದೆ, ಋಣಾತುರಿಯ, ಮುಕ್ತ್ಯಾತುರಿಯ, ಸ್ವಇಚ್ಫಾತುರಿಯಂಗಳಲ್ಲಿ ಉಂಬ ಠಾವಿನಲ್ಲಿ ಬದ್ಧನಾಗದೆ, ಸ್ತುತಿಯಲ್ಲಿ ನಿಲ್ಲದೆ, ನಿಂದೆಯಲ್ಲಿ ಓಡದೆ, ಆ ಉಭಯವ ಒಂದೂ ಅರಿಯದೆ, ಸರ್ವಾಂಗಮುಖ ಜಂಗಮವಾಗಿ, ಗುರುಲಿಂಗ ಉಭಯಸ್ಥಲ ಗರ್ಭೀಕರಿಸಿ ನಿಂದ, ಪರಮವಿರಕ್ತನ ಪಾದಾಂಬುಜವೆ ಮಜ್ಜನವಾಗಿ, ಪ್ರಸಾದವೆ ಸಂಜೀವನವಾಗಿ, ಆತನ ನಿಜಸ್ವರೂಪವೆ ಎನ್ನ ಕಂಗಳು ತುಂಬಿ, ಹಿಂಗದಿದ್ದಿತ್ತು, ನಿಃಕಳಂಕ ಮಲ್ಲಿಕಾರ್ಜುನಾ.