Index   ವಚನ - 432    Search  
 
ನಾನಾ ಯೋನಿಯಲ್ಲಿ ತಿರುಗಿ ಬಂದನಾಗಿ ಗುರುವಲ್ಲ. ನಾನಾ ಶಿಲೆಯಲ್ಲಿ ರೂಹಿಟ್ಟು ಬಂದುದಾಗಿ ಲಿಂಗವಲ್ಲ. ನಾನಾ ಯಾಚಕ ವಿಕಾರದಿಂದ ತಿರುಗುವನಾಗಿ ಜಂಗಮವಲ್ಲ. ಜನನರಹಿತ ಗುರು, ಅವತಾರರಹಿತ ಲಿಂಗ, ಮರಣರಹಿತ ಜಂಗಮ. ಹೀಗಲ್ಲದೆ ತ್ರಿವಿಧವ ಕಳೆಯಬಾರದು. ತ್ರಿವಿಧಕ್ಕೆ ತ್ರಿವಿಧವನಿತ್ತು, ಗುರುವಿನ ಹಂಗ ಮರೆಯಬೇಕು. ತ್ರಿವಿಧಕ್ಕೆ ತ್ರಿವಿಧವನಿತ್ತು, ಲಿಂಗದ ಹಂಗ ಮರೆಯಬೇಕು. ತ್ರಿವಿಧಕ್ಕೆ ತ್ರಿವಿಧವನಿತ್ತು, ಜಂಗಮದ ಹಂಗ ಮರೆಯಬೇಕು. ಮೂರರೊಳಗಾದ ಆರು ಕೊಟ್ಟು, ಐದನಿರಿಸಿಕೊಂಡು, ಇಪ್ಪತ್ತೈದರ ಲೆಕ್ಕದಲ್ಲಿರಿಸಿ, ಐವತ್ತೊಂದು ಬಿಂದುವಿನಲ್ಲಿ ಹೊಂದಿಸಿ, ಓಂಕಾರವಪ್ಪ ಪ್ರಣಮವ ಪರಿಣಾಮಿಸಿ, ವ್ಯಾಪಾರದ ಲತೆಯ ಬಳ್ಳಿಯ ಬೇರ ಕಿತ್ತು, ಪರ್ವಿ ಪ್ರಕಾರದಿಂದ ಉರ್ವಿಯ ಸುತ್ತಿಮುತ್ತಿ ಬೆಳೆದ ಚಿತ್ತಬಿದಿರಿನ ನಡುವಿದ್ದ ಹುತ್ತದ ಬಹುಮುಖದ ಸರ್ಪನ ಹಿಡಿದು, ಕಾಳೋರಗನಂ ಬೇರು ಮಾಡಿ, ಲೀಲೆಗೆ ಹೊರಗಾಗಿ ಭಾಳಲೋಚನನಂ ಕೀಳುಮಾಡಿ, ಬಾಲೆಯರ ಬಣ್ಣಕ್ಕೆ ಸೋಲದೆ, ಕಾಳುಶರೀರವೆಂಬ ಒತ್ತರಂಗೊಳ್ಳದೆ, ಗತಿ ಮತಿ ಗುಣ ಸಂಸರ್ಗ ವಿಪಿನ ಕಂಟಕಕ್ಕೊಳಗಾಗದೆ, ಪಿಂಡಪ್ರಾಣದ ವಾಯುಸಂಚಾರಕ್ಕೀಡುಮಾಡದೆ, ಅರಿದೆನೆಂಬುದಕ್ಕೆ ಕುರುಹಿಲ್ಲದೆ, ಕುರುಹಿಗೆ ಅವಧಿಗೊಡಲಿಲ್ಲದೆ, ಹುಸಿ ಮಸಿಯ ಮಣಿಮಾಡದಲ್ಲಿ ಒರಗದೆ, ಪರಿಣಾಮವೇ ಪಥ್ಯವಾಗಿ, ಅಂತರಂಗಶುದ್ಧಿ ಪರಿಪೂರ್ಣವಾಗಿ ನಿಂದು, ಸಂಸಾರಕ್ಕೆ ಸಿಕ್ಕದೆ, ನಿಂದ ನಿಜ ತಾನಾಗಿ ಲಿಂಗೈಕ್ಯವು. ನಿಃಕಳಂಕ ಮಲ್ಲಿಕಾರ್ಜುನನಲ್ಲಿ ಸರ್ವಾಂಗದಲ್ಲಿ ನಿರ್ಲೇಪವಾ[ದುದೇ] ಶರಣಸ್ಥಲ.