Index   ವಚನ - 496    Search  
 
ಪೃಥ್ವಿ ಅಪ್ಪು ತೇಜ ವಾಯು ಆಕಾಶವೆಂಬ ಪಂಚಭೌತಿಕದ ಜಗದುತ್ಪತ್ಯವೆಂಬುದು ಹುಸಿಮಾತು. ನಾನೆಂಬುದೆ ಐದು, ಆ ಐದರಿಂದ ಒದಗಿದ ಜಗ, ಲಯವಾದ ಮತ್ತೆ ಜಗವಿಲ್ಲವಾಗಿ. ತನ್ನ ಗುಣವೆ ಪೃಥ್ವಿ, ತನ್ನ ಗುಣವೆ ಅಪ್ಪು, ತನ್ನ ಗುಣವೆ ವಾಯು, ತನ್ನ ಗುಣವೆ ಆಕಾಶ, ತನ್ನಿಂದನ್ಯವಪ್ಪುದೊಂದಿಲ್ಲವಾಗಿ. ಅದಕ್ಕೆ ದೃಷ್ಟ: ಮರ್ಕಟ ದರ್ಪಣಸ್ಥಾನವೆಂದರಿವುದು. ಆ ಉಚಿತ ಬೀಜಕ್ಕುಚಿತವಪ್ಪುದೆ ಅದಕ್ಕೆ ದೃಷ್ಟ. ಪರುಷದ ಗಿರಿಯಲ್ಲಿ ಕಬ್ಬುನದ ಮೊರಡಿಯುಂಟೆ ? ಕ್ಷೀರ ಜಲಧಿಯಲ್ಲಿ ಕ್ಷಾರಜಲ ಸ್ಥಾಪ್ಯವುಂಟೆ ? ಕಲ್ಪದ್ರುಮದಗ್ರದಲ್ಲಿ ದತ್ತೂರದ ಫಲವುಂಟೆ ? ನೆರೆ ಸತ್ಯನಲ್ಲಿ [ಹಾ]ರುವ ಮನದವನುಂಟೆ ? ಇಂತಿವನರಿದು ನಿಃಶಬ್ದನಾದ ಮಹಾತ್ಮಂಗೆ ಗುರುವೆಂದರು, ಲಿಂಗವೆಂದರು, ಜಂಗಮವೆಂದರು. ಸ್ಥಾವರವೊಂದಾದಡೆ, ಶಾಖೆಯ ಲಕ್ಷ್ಯದ ತೆರನಂತೆ. ಅದಕ್ಕೆ ಪರಿಯಾಯ ಭಕ್ತ ಮಾಹೇಶ್ವರ ಪ್ರಸಾದಿ ಪ್ರಾಣಲಿಂಗಿ ಶರಣೈಕ್ಯ. ಇಂತೀ ಷಟ್‍ಸ್ಥಲದ ಎಲ್ಲಾ ಬೆಳಗಿನ ಕಳೆಯನೊಳಕೊಂಡಿಪ್ಪ ಮಹಾತ್ಮನಂ ಶಿವಭೌತಿಕವೆಂದರಿಯದೆ, ಬೀಗವ ತೆಗೆದಲ್ಲಿಯೆ ಕಂಡಿತ್ತು, [ಆಭ]ರಣದ ಇರವು, ನಿಃಕಳಂಕ ಮಲ್ಲಿಕಾರ್ಜುನಾ.