Index   ವಚನ - 505    Search  
 
ಪೃಥ್ವಿಶೂನ್ಯ ಅಪ್ಪುಶೂನ್ಯ ತೇಜಶೂನ್ಯ ವಾಯುಶೂನ್ಯ ಆಕಾಶಶೂನ್ಯ. ಇಂತೀ ಪಂಚಭೌತಿಕ ಶೂನ್ಯದ ಗುಣದ ವಿವರದ ಪರಿಭೇದದ ದೇವರ, ಸದ್ಯೋಜಾತ ಮುಖದಲ್ಲಿ ಉದಕ ಉರಿದು ಬೆಂಕಿ ನುಂಗಿತ್ತ ಕಂಡೆ, ನಿಧಾನ ನೆಲನ ನುಂಗಿತ್ತ ಕಂಡೆ. ಮಡಕೆ ಕರಗಿ ಬೆಣ್ಣೆ ಉಳಿಯಿತ್ತು ನೋಡಾ. ಉಳಿದುದ ಮತ್ತೆಣಿಸಲುಂಟೆ ಅಯ್ಯಾ ? ಬೀಜದೊಳಗಣ ವೃಕ್ಷ ಗಾಳಿಗೆ ಉರುಳಿ ಬೀಳುವ ತೆರನುಂಟೆ ? ಶಿಲೆಯೊಳಗಣ ಪಾವಕ ಸುಡಬಲ್ಲುದೆ ಅಯ್ಯಾ ? ಜೀವ ಸತ್ತು, ಕಾಯವಳಿದ ಮತ್ತೆ ಕಾಯ ಸತ್ತು, ಜೀವ ಉಳಿದ ಮತ್ತೆ ಕಾಬುದಿನ್ನೇನೋ ? ಕಾಯದ ಗುಣದಿಂದ ಜೀವವ ಮರೆದು ಕಾಬುದಿನ್ನೇನೊ ? ಜೀವಗುಣದಲ್ಲಿ ಕಾಯದ ಜೀವದ ಹಂಗಿನೊಳಗಿದ್ದು ಸಾವ ಲಿಂಗವ ದೇವರೆಂದು ಪೂಜಿಸುತಿಪ್ಪರು ನೋಡಾ. ಕರ್ತಾರನ ಕಮ್ಮಟದಲ್ಲಿ ಚಿಕ್ಕಮಕ್ಕಳ ಕೈಯ ಇಕ್ಕುಗೋಳಿನೊಳಗಾಯಿತ್ತು ನೋಡಾ. ನಿತ್ಯತೃಪ್ತನೆಂಬ ಲಿಂಗ ಸಿಕ್ಕಿತ್ತಯ್ಯ. ಭವದಾಶೆಗೊಡಲಾಗಿ ನಿತ್ಯತ್ವವನರಿಯದೆ, ಇಷ್ಟದೊಳಗೆ ಸಿಕ್ಕಿ ಕೆಟ್ಟರಲ್ಲ. ಜಗವೆಲ್ಲ ಕೆಟ್ಟ ಕೇಡ ನೋಡಾ. ತುಟ್ಟತುದಿಯಲ್ಲಿ ನಿಂದು ಬಿಟ್ಟೆನಯ್ಯಾ. ಮರ್ತ್ಯದ ಮಹಾಗಣಂಗಳ ಕಟ್ಟಿಗೆಯ ಹೊತ್ತು ಸತ್ತವರಿಗನ್ನೆತ್ತಣ ಮುಕ್ತಿಯೊ, ನಿಃಕಳಂಕ ಮಲ್ಲಿಕಾರ್ಜುನಾ ?