Index   ವಚನ - 506    Search  
 
ಪ್ರಭುದೇವರು ಬಂದ ಬರವಿನ ವೃದ್ಧಿ ಅವಧಿಯಿಲ್ಲ. ಕಲ್ಲನೆತ್ತಿದವರ ಕೂಡೆ ಗೆಲ್ಲಸೋಲಕ್ಕೆ ಹೋರಿಯಾಡಿ, ಬಲ್ಲೆವೆಂದು ಗೆಲ್ಲಗೂಳಿಗಳ ಕೂಡೆ ಬಲ್ಲತನಕ್ಕೆ ನೆಲೆಗೊಟ್ಟು, ಒಳ್ಳೆಹವರ ಗುಣವನರಸೆಹೆನೆಂದು, ಎಲ್ಲಾ ಠಾವಿನಲ್ಲಿ ತಿರುಗಿಬಂದು ಅಟ್ಟ ಊಟದಲ್ಲಿ ನಿಷ್ಠೆಯ ತೋರಿಹೆನೆಂದು, ಕಷ್ಟಗುಣವಾದ ಬೇಟವ ಹೊಕ್ಕೆನೆಂಬ ಕಷ್ಟಗುಣ ಬಿಡದು. ಭಾವದ ಕದಳಿಯಂ ಮರೆದು, ವಾಯದ ಕದಳಿಯಂ ಹೊಕ್ಕು, ಭಾವದ ಭ್ರಮೆಯಿಂದ ತಿರುಗಿ ಬಂದು, ಸಂಗನಬಸವಣ್ಣಂಗೆ ಸಂಗವಿಶೇಷವ ತೋರದೆ ಹಂಗಿಸಿ ಕೊಟ್ಟೆಯಲ್ಲಾ, ಸಂಗಮೇಶ್ವರದೇವರೆಂಬ ಕಲ್ಲಿನ ಮನೆಯ ಕಲ್ಲಿನೊಳಗೆ ಹೊಕ್ಕು ವಲ್ಲಭನನರಿಯದೆ, ಪ್ರಭು ಮೊದಲಾಗಿ ಇವರೆಲ್ಲರು ಕೆಟ್ಟರಲ್ಲಾ. ನಮಗೆ ಬಲ್ಲತನವ ತೋರಿದ ಎನ್ನ ವಲ್ಲಭ ನೀನೆ ಚೆನ್ನಬಸವಣ್ಣ, ಸಂಗನಬಸವಣ್ಣಂಗೆ, ಪ್ರಮಥಗಣಂಗಳು ಮೊದಲಾದವರಿಗೆ, ಎನಗೆ, ನಿಃಕಳಂಕ ಮಲ್ಲಿಕಾರ್ಜುನಂಗೆ, ನಿನ್ನಿಂದೆ ಭವವಿರಹಿತನಾದೆ.