Index   ವಚನ - 510    Search  
 
ಪ್ರಾಣಲಿಂಗಿಗಳೆಂದು ನುಡಿವುತಿಪ್ಪ ಅಣ್ಣಗಳು ನೀವು ಕೇಳಿರೆ. ಲಿಂಗಕ್ಕೆ ಪ್ರಾಣ ಮೊದಲೋ? ಪ್ರಾಣಕ್ಕೆ ಲಿಂಗ ಮೊದಲೋ? ಈ ಉಭಯವ ವಿಚಾರಿಸಿಕೊಂಡು ನುಡಿಯಿರಣ್ಣಾ. ವಾಯು ಗಂಧವ ಸೋಂಕಿತೊ? ಗಂಧ ವಾಯುವ ಸೋಂಕಿತೊ? ಲಿಂಗವ ಮನವರಿಯಿತೊ? ಮನವ ಲಿಂಗವರಿಯಿತೊ? ಕಾಯದಿಂದ ಸೋಂಕಿದ ಸುಖವ ಮನದಿಂದರಿದವರಾರೊ? ಮನದಲ್ಲಿ ಮುಟ್ಟಿದ ಗುಣವ ತನುವಿನಿಂದರಿದವರಾರೊ? ಇಂತೀ ಉಭಯವನರಿದಡೆ ಪ್ರಾಣಲಿಂಗಿಗಳೆಂಬೆ. ಉರಿ ಸೋಂಕಿದ ಕರ್ಪುರಕ್ಕೆ ನಿಲುವುದಕ್ಕೆ ನೆಲೆವನೆಯಿನ್ನಾವುದೊ? ಭ್ರಮರ ಸೋಂಕಿದ ಸುವಾಸನೆಗೆ ಕಡೆ ನಡು ಮೊದಲಾವುದೊ? ಧೂಳು ಕೊಂಡ ಜಲಕ್ಕೆ ನೆಲೆಯಿನ್ನಾವುದೊ? ಲಿಂಗ ಸೋಂಕಿದ ಮನಕ್ಕೆ, ಲಿಂಗನವರಿವುದಕ್ಕೆ ನೆಲೆಗೊಂಬ ಠಾವಿನ್ನಾವುದೊ? ಇಂತೀ ಗುಣಂಗ[ಳೆಲ್ಲ] ಕಳೆದುಳಿದ ಮಹಾತ್ಮಂಗೆ ನಮೋ ನಮೋ, ನಿಃಕಳಂಕ ಮಲ್ಲಿಕಾರ್ಜುನಾ.