Index   ವಚನ - 513    Search  
 
ಬಂದ ಪದಾರ್ಥವ ಸವಿದು ಚಪ್ಪಿರಿದು, ಆಹಾ ಲಿಂಗಕ್ಕೆ ಅರ್ಪಿತವಾಯಿತ್ತೆಂದು ಕಂಗಳ ಮುಚ್ಚಿ, ಅಂಗವ ತೂಗಿ, ಮಹಾಲಿಂಗವೆ ನೀನೇ ಬಲ್ಲೆ ಎಂದು ಕಂಡವರು ಕೇಳುವಂತೆ, ಹಿಂಗದ ಲಿಂಗಾಂಗಿ ಇವನೆಂದು ವಂದಿಸಿಕೊಳ್ಳಬೇಕೆಂದು, ಅಂದಗಾರಿಕೆಯಲ್ಲಿ ನಡೆವ ಭಂಡರಿಗೆಲ್ಲಿಯದೊ ಲಿಂಗಾರ್ಪಿತ ? ಲಿಂಗಕ್ಕೆ ಸಂದ ಸವಿಯ, ಹಿಂದೆ ಮುಂದೆ ಇದ್ದವರು ಕೇಳುವಂತೆ ಲಿಂಗಾರ್ಪಿತವುಂಟೆ ? ಭ್ರಮರ ಕೊಂಡ ಕುಸುಮದಂತೆ, ವರುಣ ಕೊಂಡ ಕಿರಣದಂತೆ, ವಾರಿ ಕೊಂಡ ಸಾರದಂತೆ, ತನ್ನಲ್ಲಿಯೇ ಲೇಪ ಅರ್ಪಿತ ಅವಧಾನಿಗೆ. ಹೀಂಗಲ್ಲದೆ ಕೀಲಿನೊಳಗಿಪ್ಪ ಕೀಲಿಗನಂತೆ, ಇನ್ನಾರಿಗೆ ಹೇಳುವೆ, ನಿಃಕಳಂಕ ಮಲ್ಲಿಕಾರ್ಜುನಾ.