Index   ವಚನ - 536    Search  
 
ಬೀಜ ಹುಟ್ಟುವಲ್ಲಿ ಒಂದೆ ಗುಣ. ನಿಂದಲ್ಲಿ ನಾನಾ ಪ್ರಕಾರಗಳಿಂದ ಭೂಮಿಯಲ್ಲಿ ಪ್ರವೇಶಿಸಿಕೊಂಡಿಪ್ಪ ತೆರದಂತೆ, ಆ ಮೂಲ ಮೇಲಂಕುರಿಸಿದ ಮತ್ತೆ ಐದುಗುಣದಲ್ಲಿ ಶಾಖೆವಡೆಯಿತ್ತು, ಮೂರು ಗುಣದಲ್ಲಿ ಎಲೆಯಂಕುರಿಸಿತ್ತು, ಎಂಟುಗುಣದಲ್ಲಿ ಕುಸುಮ ಬಲಿಯಿತ್ತು, ಉದುರಿ ಹರಳು ನಿಂದಿತ್ತು. ನವಗುಣದಲ್ಲಿ ಆ ರಸ ಬಲಿಯಿತ್ತು, ಷೋಡಶದಲ್ಲಿ ತೊಟ್ಟು ಬಿಟ್ಟಿತ್ತು. ಪಂಚವಿಂಶತಿಯಲ್ಲಿ ಸವಿದ ರುಚಿ ನಿಂದಿತ್ತು, ಶತಕದಲ್ಲಿ ಮರ[ನಾ]ಯಿತ್ತು. ವೃಕ್ಷದ ಬೇರು ಕಡಿಯಿತ್ತು, ಮರ ಬಿದ್ದಿತ್ತು, ಕೊಂಬು ಹಂಗ ಬಿಟ್ಟಿತ್ತು, ಕೊಂಬಿನೊಳಗಣ ಕೋಡಗ ಬಂಧುಗಳನೊಡಗೂಡಿ, ಸಂದೇಹವಿಲ್ಲವಾಗಿ, ಶ್ರುತ ದೃಷ್ಟ ಅನುಮಾನದಲ್ಲಿ ತಿಳಿಯಿರಣ್ಣಾ. ಬ್ರಹ್ಮನ ಉತ್ಪತ್ತಿ, ವಿಷ್ಣುವಿನ ಸ್ಥಿತಿ, ರುದ್ರನ ಲಯ. ಇಂತೀ ಮೂವರ ಹಂಗಿಂದ ಬಂದ ದೇಹಕ್ಕೆ ಕಟ್ಟುವ ದೃಷ್ಟವ ನೋಡಾ. ಒಮ್ಮೆಗೆ ಕಾರುಕನಲ್ಲಿ, ಇಮ್ಮೆಗೆ ಹರದಿಗನಲ್ಲಿ, ತ್ರಿವಿಧಕ್ಕೆ ಮಮ್ಮಾರಿನಲ್ಲಿ ಆದಿಯ ಹೆಣ್ಣಿನ ತೆರದಂತೆ, ಅವರ ಕಂಡು ಆಹಾ ಅದಲ್ಲವೆಂಬೆ, ನಿಃಕಳಂಕ ಮಲ್ಲಿಕಾರ್ಜುನಾ.