ಮಧುರದ ಗುಣ ಬದರಿಯಿಂದಳಿಯಿತ್ತು,
ಶರಧಿಯ ಗುಣ ಸಾಗಲಾಗಿ ಅಳಿಯಿತ್ತು,
ಬೇಟದ ಗುಣ ಕೂಟದಿಂದಳಿಯಿತ್ತು, ಸಾರದ ಗುಣ ಕಠಿನದಿಂದಳಿಯಿತ್ತು,
ಕಠಿಣದ ಗುಣ ಪಾಕದಿಂದಳಿಯಿತ್ತು,
ಕಾಯದ ಗುಣ ಪ್ರಾರಬ್ಧದಿಂದಳಿಯಿತ್ತು,
ವಿಷದ ಗುಣ ನಿರ್ವಿಷದಿಂದಳಿಯಿತ್ತೆಂಬುದಜನ ಸಿದ್ಧಾಂತವಾಗಿ ನುಡಿವುತ್ತಿದೆ.
ಎನ್ನ ಗುಣ ನಿನ್ನಿಂದಲ್ಲದೆ ಅಳಿಯದಯ್ಯಾ.
ಕಾಲಕ್ಕಂಜಿ, ಕರ್ಮಕಂಜಿ, ವಿಧಿವಿಧಾಂತನಿಗಂಜಿ,
ಹಿರಿಯರೆನಿಸಿಕೊಂಬ ಗ್ರಾಸವಾಸಿಗಳು ನೀವು ಕೇಳಿರಯ್ಯಾ.
ರುದ್ರನ ಪಸರವ ಹೊತ್ತು, ಆಶೆಯೆಂಬ ಕಂಥೆಯಂ ತೊಟ್ಟು,
ಜಗದಾಟವೆಂಬ ವೇಷವ ಧರಿಸಿ,
ಈಶನ ಶರಣರೆಂದು ಭವಪಾಶದಲ್ಲಿ ತಿರುಗುವ ದೇಶಿಗರ ಕಂಡು ನಾಚಿದೆ.
ಭಾಷೆಗೆ ತಪ್ಪದ ನಿರ್ಗುಣ ನಿರಾಶಕ,
ನಿಃಕಳಂಕ ಮಲ್ಲಿಕಾರ್ಜುನನಲ್ಲದಿಲ್ಲ, ನಿಲ್ಲು ಮಾಣಿರೊ.