ಮಹಾಭಕ್ತರು ಮಾಡುವ ಅಭ್ಯಾಸ, ಕ್ರೀ ಲೇಸಿನ ಭಕ್ತಿಯ ಕೇಳಿರಣ್ಣಾ.
ಜಂಗಮದ ಕೈಯಲ್ಲಿ ಅಸಿ ಕೃಷಿ ವಾಣಿಜ್ಯ ಮುಂತಾದ
ಊಳಿಗವ ಮಾಡಿಸಿಕೊಂಡು,
ಪ್ರಸಾದವ ಕೊಂಬ ಪಂಚಮಹಾಪಾತಕರ ಅಂಗಳವ ಮೆಟ್ಟಿದಡೆ,
ಸಂಗದಲ್ಲಿ ನುಡಿದಡೆ ಕುಂಭೀಪಾತಕ.
ಅವರ ಹಿಂಗದಿರ್ದಡೆ ಲಿಂಗವಿಲ್ಲ, ಜಂಗಮವಿಲ್ಲ, ಪಂಚಾಚಾರ ಶುದ್ಧಕ್ಕೆ ದೂರ.
ಇದು ಕಾರಣ, ಮಾಟಕೂಟದವರೆಲ್ಲಾ ಜಗದಾಟದ ಡೊಂಬರೆಂದೆ.
ಈಶನಾಣೆ ತಪ್ಪದು, ನಿಃಕಳಂಕ ಮಲ್ಲಿಕಾರ್ಜುನಾ.