ಮೂರು ತಟ್ಟೆಯ ನಡುವೆ, ಒಂದು ಕಂಬವ ನಟ್ಟು,
ಎಂಬತ್ತನಾಲ್ಕು ಲಕ್ಷ ದಾರವ[ಟ್ಟ] ಕಟ್ಟಿ,
ಅದರ ಮೇಲೆ ನಿಂದಾಡುತ್ತಿರಲಾಗಿ,
ನಡುವಣ ಕಂಬ ಮುರಿದು ಬೀಳುತ್ತಿರಲಾಗಿ,
ಕಂಡೆ, ಮೂರು ತಟ್ಟೆಯಲ್ಲಿ ಕಟ್ಟಿದ ನೇಣ ಹಿಡಿದು,
ಕೆಳಯಿಕ್ಕೆ ಧುಮುಕಲಮ್ಮದೆ, ಮೇಲಕ್ಕೆ ಹತ್ತಲಮ್ಮದೆ,
ನಡುವೆ ಉಯ್ಯಾಲೆಯನಾಡುತ್ತಿರ್ದೆನಯ್ಯಾ.
ಇರ್ದವನ ಕಂಡು, ಹಿರಿದಪ್ಪ ಆಕಾಶದಲ್ಲಡಗಿರ್ದ
ಹದ್ದುಬಂದು ಹೊಯ್ಯಲಾಗಿ, ಕಪಾಲ ಸಿಡಿಯಿತ್ತು.
ಮೂರು ತಟ್ಟೆ ಮುರಿಯಿತ್ತು.
ಎಂಬತ್ತುನಾಲ್ಕುಲಕ್ಷ ಕಣ್ಣಿ ಒಂದೂ ಇಲ್ಲದಂತೆ ಕಿತ್ತವು.
ಅದಕ್ಕೆ ಬಂಧಮುಕ್ತವೇನೆಂಬೆ,
ನಿಃಕಳಂಕ ಮಲ್ಲಿಕಾರ್ಜುನಾ.