ಲೇಸಾಯಿತ್ತಯ್ಯಾ ಎನ್ನ ಕಾಡುವುದು.
ಎಲೆ ದೇವ, ನಿನಗದು ಕಾರುಕನ ಬುದ್ಧಿಯಂತೆ.
ಅಡಿಗೆ ನಾನಾಗಿ, ಮೇಲೆ ಹೊಡೆವುದಕ್ಕೆ ನೀನಾಗಿ.
ಎರಡರ ನಡುವೆ ಹೊಡೆಯಿಸಿಕೊಂಬುದಕ್ಕೆ ನೀನಾಗಿ.
ತನ್ನ ವಂಶ ತನಗೆ ಹಗೆಯಾಗಿ,
ಕೊಡಲಿಯ ಕಾವು ಕುಲಕ್ಕೆ ಮಿತ್ತಾದಂತೆ,
ಎಲ್ಲವೂ ನೀನಾಗಿ, ಎನ್ನನೇಕೆ ಕಾಡಿಹೆ,
ನಿಃಕಳಂಕ ಮಲ್ಲಿಕಾರ್ಜುನಾ ?