Index   ವಚನ - 759    Search  
 
ಸುರೆಯ ಮಡಕೆಯ ಮೇಲೆ ವಿಭೂತಿಯ ಪೂಸಿ ಕುಸುಮದಲ್ಲಿ ಪೂಜಿಸಿ, ದೇವರೆಂದು ಅರ್ಚಿಸಿ, ಪೂಜಿಸಿ ಕುಡಿಯುತ್ತಿರ್ಪ ನರರಂತಾದಿರಯ್ಯಾ. ಈದ ಎಮ್ಮೆಯ ಕೊರಳಿನಲ್ಲಿ ಬೀಜವ ಕಟ್ಟಿದಾತ ಗುರುವೆ ? ಕಟ್ಟಿಸಿಕೊಂಡ ಪಶುವಿಗೆತ್ತಣ ಮುಕ್ತಿಯೋ ? ಬಟ್ಟೆಯನರಿಯದ ಗುರು, ಸೃಷ್ಟಿಯನರಿಯದ ಶಿಷ್ಯ, ವ್ಯರ್ಥವಾಯಿತ್ತಲ್ಲಾ ಕಟ್ಟಿದ ಲಿಂಗ. ನೆಟ್ಟನೆ ಗುರುವಾದಡೆ ಮತ್ತೆ ಬಟ್ಟೆಯ ಮೆಟ್ಟಲೇಕೊ ? ತೊಟ್ಟು ಬಿಟ್ಟ ಹಣ್ಣಿಂಗೆ ಕಟ್ಟಿಗೆಯ ಹಂಗೇಕೊ ? ದ್ರವ್ಯವನರಿವುದಕ್ಕೆ ಆಯಸ್ಕಾಂತದ ಶಿಲೆಯ ತೆರದಂತೆ, ಲೋಹದ ವಿನಯದಂತೆ, ಅನಲನ ತೃಣಸಂಗದಂತೆ, ಅನಿಲ ಗಂಧ ಕೂಟದಂತೆ, ನಿಃಕಳಂಕ ಮಲ್ಲಿಕಾರ್ಜುನನ ಕೂಟದ ಕುಟಿಲ.