Index   ವಚನ - 768    Search  
 
ಸ್ಥೂಲದಲ್ಲಿ ಕಾಬ ತನುವಿಂಗೆ ಆವುದು ದೃಷ್ಟ? ಸೂಕ್ಷ್ಮದಲ್ಲಿ ಕಾಬ ತನುವಿಂಗೆ ಆವುದು ದೃಷ್ಟ? ಕಾರಣದಲ್ಲಿ ಕಾಬ ತನುವಿಂಗೆ ಆವುದು ದೃಷ್ಟ? ದೃಷ್ಟಕ್ಕೆ ದೃಷ್ಟವ ಕಂಡಲ್ಲದೆ ಮನ ನಿಶ್ಚಯಿಸದು. ಶ್ರುತದಲ್ಲಿ ಕೇಳಿ, ದೃಷ್ಟದಲ್ಲಿ ಕಂಡು, ಅನುಮಾನದಲ್ಲಿ ಅರಿದು, ಭಾವ ನಿರ್ಭಾವವಾಗಿಯಲ್ಲದೆ ನಿಶ್ಚಯವಿಲ್ಲ. ನಿಶ್ಚಯಕ್ಕೆ ಒಳಗಾಹನ್ನಬರ ಅಂಗಕ್ಕೆ ಆಚಾರ, ಮನಕ್ಕೆ ಅರಿವು. ಅರಿವಿಂಗೆ ನಿರಾಳವಹನ್ನಕ್ಕ, ಸ್ಥೂಲದಲ್ಲಿ ಮುಟ್ಟಿ, ಸೂಕ್ಷ್ಮದಲ್ಲಿ ಅರಿದು, ಕಾರಣದಲ್ಲಿ ಕೂಡಿ, ಕೂಟ ಏಕಸ್ಥವಾದಲ್ಲಿ, ತ್ರಿವಿಧಲಿಂಗ ತ್ರಿವಿಧ ಲಿಂಗಾರ್ಪಣವಾಯಿತ್ತು. ಆದಲ್ಲಿ ಭಾವವಿಲ್ಲದಿಪ್ಪುದು ಪ್ರಾಣಲಿಂಗ ಸಂಬಂಧ, ನಿಃಕಳಂಕ ಮಲ್ಲಿಕಾರ್ಜುನಾ.