Index   ವಚನ - 44    Search  
 
ಖಂಡಿತವ್ರತದ ನಿರಂಗನ ವ್ರತವೆಂತುಟೆಂದಡೆ; ತನ್ನ ಸತಿಗೆ ಗರ್ಭ ತಲೆದೋರಿದಲ್ಲಿಯೆ, ಮುಖವ ಕಾಂಬುದಕ್ಕೆ ಮುನ್ನವೆ ಲಿಂಗಧಾರಣಮಂ ಮಾಡಿ, ಮಾಡಿದ ಮತ್ತೆ ತನ್ನ ವ್ರತದ ಪಟ್ಟವಂ ಕಟ್ಟಿ, ಶಕ್ತಿಯಾದಲ್ಲಿ ತನ್ನ ನೇಮದ ವ್ರತಿಗಳಿಗೆ ಕೊಟ್ಟಿಹೆನೆಂದು ಸುತನಾದಲ್ಲಿ ತನ್ನ ನೇಮದ ವ್ರತಿಗಳಲ್ಲಿ ತಂದೆಹೆನೆಂದು, ಗಣಸಾಕ್ಷಿಯಾಗಿ ವಿಭೂತಿಯ ಪಟ್ಟವಂ ಕಟ್ಟಿ ಇಪ್ಪುದು ಖಂಡಿತನ ವ್ರತ, ಶೀಲ, ನೇಮ. ಹಾಗಲ್ಲದೆ ದಿಂಡೆಯತನದಿಂದ ಹೋರಿ, ಮಕ್ಕಳಿಗೆ ಸಂದೇಹದ ವ್ರತವ ಕಟ್ಟಬಹುದೆಯೆಂದು ಬುದ್ಧಿಯಾದಂದಿಗೆ ವ್ರತವಾಗಲಿಯೆಂಬವರ ಅಂಗಳವ ಮೆಟ್ಟಬಹುದೆ? ಅದೆಂತೆಂದಡೆ: ವ್ರತದ ಅಂಗಳದಲ್ಲಿ ಬೆಳೆದ ಗರ್ಭವ ಮತ್ತಂದಿಗಾಗಲಿಯೆಂಬ ಭಂಡರ ನೋಡಾ; ಅಂದಿಗಾಗಲಿಯೆಂಬವನ ವ್ರತ ಇಂದೆ ಬಿಟ್ಟಿತ್ತು. ಅದೆಂತೆಂದಡೆ: ತನ್ನಂಗದಲ್ಲಿ ಆದ ಲಿಂಗದೇಹಿಯ ಮುಂದಕ್ಕೆ ಭವಿಸಂಗಕ್ಕೆ ಈಡುಮಾಡುವ ವ್ರತಭಂಗಿತನ ಕಂಡು, ಅವನೊಂದಾಗಿ ನುಡಿದಡೆ ಕುಂಭೀನರಕ. ಆಚಾರವೆ ಪ್ರಾಣವಾದ ರಾಮೇಶ್ವರಲಿಂಗವೆ ಅವನ ಹಂಗಿರಬೇಕಯ್ಯಾ.