Index   ವಚನ - 55    Search  
 
ತಂದೆಯ ಒಂದಾಗಿ ಬಂದ ಸಹೋದರ ಗಂಡೆಲ್ಲ ತಂದೆಯಾದ ಕಾರಣ, ಆ ತಂದೆಯ ಒಡಹುಟ್ಟಿದ ಹೆಣ್ಣೆಲ್ಲ ತನಗೆ ತಾಯಲ್ಲವೆ? ಆಕೆಯನತ್ತೆಯೆಂಬ ಜಗದ ತೆತ್ತುಮತ್ತರ ನಾವರಿಯೆವಯ್ಯಾ. ಮತ್ತೆ, ತಾವು ಬಳಸುವುದಕ್ಕೆ ಗೊತ್ತಿಲ್ಲವೆಂದಾಕೆಯ ಮಗಳನು ಸತಿಯನೆ ಮಾಡಿಕೊಳ್ಳಬಹುದೆ? ಹೆತ್ತತಾಯ ಮಗಳ ಮಗಳು ಒಡಹುಟ್ಟಿದವಳಲ್ಲವೆ? ಸೊಸೆ ಮಾವನೆಂದು ಸತಿಯಂ ಮಾಡಿಕೊಂಬರು ನೋಡಾ. ಸೊಸೆಗೂ ಮಾವಂಗೂ ಸಂಸರ್ಗ ನಿಲ್ಲುವುದೆ? ಸತ್ಯಕ್ಕೆ ಸಮವಲ್ಲ, ಭಕ್ತಿಗೆ ಇದಿರಿಲ್ಲವೆಂದರಿದು ಮತ್ತೆ ಜಗದಲ್ಲಿ ಹೊತ್ತು ಹೋರಲೇಕೆ? ಇದು ಆಚಾರಕ್ಕೆ ನಿಶ್ಚಯ, ಆಚಾರವೆ ಪ್ರಾಣವಾದ ರಾಮೇಶ್ವರಲಿಂಗಕ್ಕೆ ಕೊಳುಕೊಡೆಯೆಂಬ ಸೂತಕ ಸದಾಚಾರದಲ್ಲಿ ಅಡಗಿತ್ತು.