ತಮ್ಮ ಆಯತದ ಉಪ್ಪೆಂದು ಬಳಸುವನ್ನಕ್ಕ
ತಾವು ತಂದು ಮಾಡಿಕೊಂಬ ಮೃತ್ತಿಕೆಯ ಸಾರವೆ ಲೇಸು.
ಅದೆಂತೆಂದಡೆ: ಮಹಾ ಅಂಬುಧಿಗಳಲ್ಲಿ
ತಾಕು-ಸೋಂಕು, ತಟ್ಟು-ಮುಟ್ಟು ಬಹವಾದ ಕಾರಣ.
ಇಂತೀ ಇವ ತಾನರಿದ ಮತ್ತೆ ಆಯತವೆಂಬುದೇನು?
ತನ್ನ ಕಾಯ ಮನ ಅರಿದು ಮಾಡಿಕೊಂಬುದೆ ವ್ರತ.
ಇಂತಿವನರಿಯದೆ ಬಳಸುವ ಬಳಕೆಗಳೆಲ್ಲವು ಸೌಕರಿಯವಲ್ಲದೆ
ವ್ರತಕ್ಕೆ ಸಲ್ಲ ಆಚಾರವಲ್ಲ.
ಆಚಾರವೆ ಪ್ರಾಣವಾದ ರಾಮೇಶ್ವರಲಿಂಗಕ್ಕೆ ಇದೆ ಆಣತಿ.