Index   ವಚನ - 138    Search  
 
ಸತ್ಯ ಸದ್ಗರು ಕರುಣಿಸಿ ಕೊಟ್ಟ ನಿತ್ಯ ನಿಃಕಳಂಕ ಲಿಂಗವ ಕರ ಮನ ಭಾವದೊಳಗಿರಿಸಿ ಅರ್ಚಿಸಿ ನಿತ್ಯ ಭೋಗವ ಪಡೆಯಲರಿಯದೆ ಗುರು ಮಾರ್ಗಾಚಾರಕ್ಕೆ ಹೊರಗಾಗಿ ಜಗದ ಜಡಕಲ್ಲು ಮಣ್ಣು ಮರ ಕಂಚು ಕಾಷ್ಠ ಒರಳು ಒನಕೆ ಪಶು ತಿಥಿ ವಾರ ನಕ್ಷತ್ರ ಹುಣ್ಣಿಮೆ ಅಮವಾಸ್ಯೆ ತಂದೆ ತಾಯಿಗಳ ತಿಥಿಯೆಂದು ಪೂಜೆ ಮಾಡುವವ ಭವಿ ಆ ಹಸ್ತದಿಂದ ಮಾಡಿದ ಪಾಕ ಭವಿ ಆ ಪಾಕವ ಪರಶಿವಲಿಂಗಕ್ಕೆ ಅರ್ಪಿಸಲಾಗದು. ಅದೆಂತೆಂದಡೆ: 'ಭವಿಹಸ್ತಕೃತಂ ಪಾಕಂ ಲಿಂಗನೈವೇದ್ಯ ಕಿಲ್ಬಿಷಂ' ಎಂದರಿದು. ನಮ್ಮ ಕೂಡಲಸಂಗನ ಶರಣರು ಭವಿಪಾಕವ ಮುಟ್ಟದೆ ಸರ್ವಮತದಿಂದ ಪದಾರ್ಥವ ಕೊಂಡು ಸ್ವಪಾಕವ ಮಾಡಿ ಪರಮ ಇಷ್ಟ ಮಹಾಲಿಂಗವೆ ತಾವೆಂದರಿದು ಸುಖಿಸಿ ನಿಜೈಕ್ಯರಾದರು ನೋಡಾ ಆಚಾರವೇ ಪ್ರಾಣವಾದ ರಾಮೇಶ್ವರ ಲಿಂಗದಲ್ಲಿ.