ಸದೈವ ಆವಾವ ಗೋತ್ರದಲ್ಲಿ ಬಂದಡೂ
ಎಣ್ಣೆ ನೀರಿನಂತೆ,
ಮಣ್ಣು ಹೊನ್ನಿನಂತೆ,
ತನ್ನ ಅನು ಆಚಾರಕ್ಕೆ ಬಂದವರ
ತನ್ನವರೆಂದು ಭಾವಿಸಬೇಕಲ್ಲದೆ,
ತನ್ನ ಆಚಾರಕ್ಕೆ ಹೊರಗಾದವರ
ಅಣ್ಣ ತಮ್ಮನೆಂದು ತಂದೆ ತಾಯಿಯೆಂದು,
ಮಿಕ್ಕಾದವರ ಹೊನ್ನು ಹೆಣ್ಣು ಮಣ್ಣಿನವರೆಂದು,
ದಿಕ್ಕುದೆಸೆಯೆಂದು ಅಂಗೀಕರಿಸಿದಡೆ,
ಅವರಂಗಳವ ಕೂಡಿದಡೆ,
ಅವರೊಂದಾಗಿ ನುಡಿದಡೆ,
ಭಕ್ತರು ಸತ್ಯರಿಗೆ ಮುನ್ನವೆ ಹೊರಗು.
ಆಚಾರವೆ ಪ್ರಾಣವಾದ ರಾಮೇಶ್ವರಲಿಂಗವು
ಅವರ ಒಳಗಿಟ್ಟುಕೊಳ್ಳ.