Index   ವಚನ - 140    Search  
 
ಸಪ್ಪೆಯ ವ್ರತವೆಂಬುದ ನಾವರಿಯೆವು, ನೀವು ಹೇಳಿರಯ್ಯಾ. ಸರ್ವ ಫಲರಸ, ಘೃತ, ತೈಲ, ಮಧುರ, ವಿದಳಧಾನ್ಯ ಮುಂತಾದವಕ್ಕೆಎಲ್ಲಕ್ಕೂ ತಮ್ಮ ತಮ್ಮಲ್ಲಿಯ ರುಚಿ ಸಪ್ಪೆಯ ನೇಮವನೊಂದನೂ ಕಾಣೆ. ಇದ ನೀವೆ ಬಲ್ಲಿರಿ. ಸಪ್ಪೆ ಯಾವುದೆಂದಡೆ ಸುಖ-ದುಃಖಂಗಳೆಂಬುದನರಿಯದೆ, ತನುವಾಡಿದಂತೆ ಆಡದೆ, ಮನ ಹರಿದಂತೆ ಹರಿಯದೆ, ಬಯಕೆ ಅರತು ಭ್ರಾಮಕ ಹಿಂಗಿ ಸರ್ವವಿಕಾರ ವಿಸರ್ಜನವಾಗಿ, ಹಿಂದಾದುದ ಮರೆದು ಮುಂದಕ್ಕೆ ಗತಿಯೆಂದು ಒಂದ ಕಾಣದೆ, ಹಿಂದು ಮುಂದೆಂದು ಒಂದನರಿಯದಿದ್ದುದೆ ಸಪ್ಪೆ. ಇದು ಅಂತರಂಗದ ವ್ರತ ಲವಣವ ಬಿಟ್ಟುದು ಬಹಿರಂಗ ಶೀಲ. ಇಂತೀ ಉಭಯವ್ರತ ಏಕವಾದಲ್ಲಿ ಸರ್ವಸಪ್ಪೆ ಸಂದಿತ್ತು ಆಚಾರವೆ ಪ್ರಾಣವಾದ ರಾಮೇಶ್ವರಲಿಂಗಕ್ಕೆ ಸಪ್ಪೆಯ ವ್ರತ ಅರ್ಪಿತವಾಯಿತ್ತು.