Index   ವಚನ - 50    Search  
 
ಅಷ್ಟಾವಷ್ಠಿ ತೀರ್ಥಂಗಳ ಮೆಟ್ಟಿದವರೆಲ್ಲಾರೂ ಭಕ್ತರಪ್ಪರೇ? ಜಪತಪ ನೇಮನಿತ್ಯ ಮಂತ್ರಾರೂಢರೆಲ್ಲಾ ಜಂಗಮವಪ್ಪರೆ? ವಚನ ಸುಲಕ್ಷಣವನರಿದಿರ್ದವರೆಲ್ಲಾ ಅನುಭಾವಿಗಳಪ್ಪರೆ? ಅದೆಂತೆಂದಡೆ: ಕೇದಾರಸ್ಯೋದಕಂ ಪೀತ್ವಾ ವಾರಾಣಸ್ಯಾಮ್ಮತಿಧ್ರುವಂ ಶ್ರೀಶೈಲಶಿಖರಂ ದೃಷ್ಟ್ವಾ ಪುನರ್ಜನ್ಮ ನ ವಿದ್ಯತೇ ಇಂತೆಂಬ ಶ್ರುತಿಯಂತಿರಲಿ, ಪ್ರಾಣಲಿಂಗಮವಿಶ್ವಸ್ಯ ತೀರ್ಥಲಿಂಗಂ ಗತೋ ನರಃ ಶ್ವನಯೋನಿಶತಂ ಗತ್ವಾ ಚಂಡಾಲಗೃಹಮಾವಿಶೇತ್ ಎಂದುದಾಗಿ, ಇಂತಲ್ಲವಯ್ಯಾ ನಮ್ಮ ಶಿವಭಕ್ತರು. ಎಂತಿಹರಯ್ಯಾ ಎಂದಡೆ: ಧ್ಯಾನವೇ ಜಪ, ಮೌನವೇ ತಪ, ನಿರ್ಭಾವವೇ ನಿಲುವು, ಸದ್ಭಾವವೇ ಪೂಜೆ. ಇಂತಪ್ಪ ದಾಸೋಹವ ಮಾಡುವ ಸದ್ಭಕ್ತನ ದರುಶನ ಎಂತಿಹುದಯ್ಯಾ ಎಂದಡೆ: ಉಪಪಾತಕ ಕೋಟೀನಿ ಬ್ರಹ್ಮಹತ್ಯಾ ಶತಾನಿ ಚ ದಹ್ಯಂತ್ಯೇಶೇಷ ಪಾಪಾನಿ ಶಿವಭಕ್ತಸ್ಯ ದರ್ಶನಾತ್ ಇಂತೆಂದುದಾಗಿ, ಸೌರಾಷ್ಟ್ರ ಸೋಮೇಶ್ವರಾ ನೀನೊಲಿದ ಶಿವಭಕ್ತರ ಅಂಗಳವೆ ವಾರಣಾಸಿ, ಮನವೆ ತೀರ್ಥವಯ್ಯಾ.