Index   ವಚನ - 72    Search  
 
ಆರು ಬಣ್ಣದ ಆರು ಲಿಂಗದಲ್ಲಿ ಮೂರು ಬಣ್ಣದ ಮೂರು ಲಿಂಗವ ಕೂಡಲು, ನವಲಿಂಗದ ಒಂಬತ್ತು ಬಣ್ಣದಲ್ಲಿ ಗುರುಲಿಂಗಜಂಗಮಪ್ರಸಾದವೆಂಬ ನಾಲ್ಕು ಬಣ್ಣವ ಕೂಡಿದ ಹದಿಮೂರು ಬಣ್ಣವ ಕ್ರೀಯೆಂಬ ಕಮ್ಮರನ ಕೈಯಲ್ಲಿ ಕೊಟ್ಟಡೆ, ವಾಸನೆಯೆಂಬ ಸೀಸವ ಬೆರಸಿದ ನೋಡಾ. ಕಮ್ಮಾರನ ಬಾಯಕುಟ್ಟಿ ಸೆಳೆಯಲಾಗಿ, ಆ ವಾಸನೆ ಅಲ್ಲಿಯೇ ಅಡಗಿ, ಅಂಗಭವಿ ಲಿಂಗಭವಿಯೆಂಬ ಅಡಗಿದ ಕಾಳಿಕೆಯಳಿದ ಸ್ವಯಬಣ್ಣದ ಮಿಸುನಿಗೆ ತನುವೆಂಬ ಒರೆಗಲ್ಲ ಹಂಗಿಲ್ಲ, ಮನವೆಂಬ ಮಚ್ಚದ ಹಂಗಿಲ್ಲ. ಭಾವವೆಂಬ ಹಸ್ತದ ಹಂಗಿಲ್ಲ, ತಮೋಗುಣವೆಂಬ ಮಯಣದ ಹಂಗಿಲ್ಲ. ಬೋಧವೆಂಬ ನೇತ್ರದ ಹಂಗಿಲ್ಲ. ಇಂತಿವರ ಹಂಗು ಹರಿದಲ್ಲಿ ಸೌರಾಷ್ಟ್ರ ಸೋಮೇಶ್ವರಲಿಂಗ ಪರವಳಿದು ಸಯವಾಯಿತ್ತು