ಒಂದು ಕಪಿಗೆ ಹತ್ತು ಮುಖ,
ಆ ಹತ್ತು ಮುಖದಲ್ಲಿ ಹತ್ತುಮರದ
ಹತ್ತು ಹಣ್ಣಯೆತ್ತೆತ್ತಿ ತಿನುತಿದ್ದಿತಯ್ಯಾ.
ಆ ಹಣ್ಣಿನ ವಿಷಯವು ತಲೆಗೇರಿ
ಮೂರು ಲೋಕವೆಲ್ಲಾ ಉರಿವುತ್ತಿದೆ.
ಈ ಪರಿಯ ಪರಿಹರಿಸುವಡೆ
ಹರಿಬ್ರಹ್ಮಾದಿಗಳಿಗೆಳವಲ್ಲ ನೋಡಯ್ಯಾ.
ಅಗ್ನಿಯ ಘಟಿಕೆಯ ನುಂಗಲು ಉರಿಕೆಟ್ಟು
ಸೌರಾಷ್ಟ್ರ ಸೋಮೇಶ್ವರಲಿಂಗ ಸಾಧ್ಯವಾಯಿತ್ತು.