Index   ವಚನ - 106    Search  
 
ಕರಸ್ಥಲದಲ್ಲಿ ಲಿಂಗವಿರಲುಆ ಹಸ್ತವೇ ಕೈಲಾಸ, ಈ ಲಿಂಗವೇ ಶಿವನು. ಇದು ಕಾರಣ ಇಲ್ಲಿಯೇ ಕೈಲಾಸ. ಇದಲ್ಲದೆ ಬೇರೆ ಬೆಳ್ಳಿಯ ಬೆಟ್ಟವೇ ಕೈಲಾಸವೆಂದು ಅಲ್ಲಿಪ್ಪ ರುದ್ರನೇ ಶಿವನೆಂದು ಕೈಲಾಸಕ್ಕೆ ಹೋದಹೆ ಬಂದಹೆನೆಂಬ ಭ್ರಾಂತು ಬೇಡ ಕೇಳಿರಣ್ಣಾ. ಕಾಯದ ಅನುಗ್ರಹ ಲಿಂಗದಲ್ಲಿ ಶ್ರದ್ಧೆ ಇಲ್ಲದೆ ಇರಲು ಇನ್ನೆಲ್ಲಿಯ ನಂಬುಗೆಯಯ್ಯಾ? ಅಲ್ಲಲ್ಲಿಗೆ ಹರಿಹಂಚಾಗಿ ಕೆಡಬೇಡ ಕೇಳಿರಣ್ಣಾ. ಅಂಗದೊಳಗೆ ಲಿಂಗಾಂಗ ಸಂಗವನರಿತು ಒಳಹೊರಗು ಒಂದೇಯಾಗಿ ಶಿಖಿಕರ್ಪುರ ಸಂಗದಲ್ಲಿ ಕರ್ಪುರ ಉರಿಯಾಗಿಪ್ಪಂತೆ, ಸರ್ವಾಂಗದಲ್ಲಿ ಲಿಂಗಸೋಂಕಿ ಅಂಗಭಾವವಳಿದು, ಲಿಂಗಭಾವ ತನ್ಮಯವಾಗಿಪ್ಪ ತದ್ಗತಸುಖ ಉಪಮಾತೀತವಯ್ಯಾ, ಸೌರಾಷ್ಟ್ರ ಸೋಮೇಶ್ವರಾ.