Index   ವಚನ - 165    Search  
 
ಚರಿಸಿ ವರ್ತಿಸುವುದೆ ಆಚಾರವಾದ ಕಾರಣ, ಇಡಾಪಿಂಗಳನಾಡಿಯಂ ರೇಚಕಪೂರಕಂಗಳು ಚರಿಸಿ ವರ್ತಿಸುವ ದೆಸೆಯಿಂ ನಾಸಿಕಕ್ಕೆ ಆಚಾರಲಿಂಗವಾಗಬೇಕಾಯಿತ್ತು. ಮಂತ್ರಮೂರ್ತಿಯೆ ಗುರುವಾದ ಕಾರಣ, ಷಡಕ್ಷರವೆ ಷಡುರುಚಿಯಾಗಿ ತೋರಿಹುದಾಗಿ ಅಂತಪ್ಪ ಷಡುರುಚಿ ಜಿಹ್ವೆಯ ಮುಖಕ್ಕೆ ಸಲುವ ದೆಸೆಯಿಂ ಜಿಹ್ವೆಗೆ ಗುರುಲಿಂಗವಾಗಬೇಕಾಯಿತ್ತು. ಸ್ವಯಂಪ್ರಕಾಶವೆ ಶಿವನಾದ ಕಾರಣ, ಆ ಮಹಾಪ್ರಕಾಶವೆ ನೇತ್ರಂಗಳೊಳು ನೆಲೆಗೊಂಡು, ಸಕಲಪದಾರ್ಥಂಗಳ ಕಾಣಿಸಿ ತೋರ್ಪ ದೆಸೆಯಿಂ ನೇತ್ರಕ್ಕೆ ಶಿವಲಿಂಗವಾಗಬೇಕಾಯಿತ್ತು. ಚರವೆ ಜಂಗಮವಾದ ಕಾರಣ, ತ್ವಕ್ಕು ಸರ್ವಾಂಗದಲ್ಲಿ ನೆಲೆಗೊಂಡು, ಅಲ್ಲಿಗಲ್ಲಿ ಪರುಶನವನರಿವುತ್ತಿಹ ದೆಸೆಯಿಂ ತ್ವಕ್ಕಿಂಗೆ ಜಂಗಮಲಿಂಗವಾಗಬೇಕಾಯಿತ್ತು. ನಾದಸುನಾದಮಹಾನಾದವೆ ಪ್ರಸಾದವಾದ ಕಾರಣ, ಪ್ರಸಾದವಪ್ಪ ಶಬ್ದಶ್ರೂೀತ್ರಮುಖಕ್ಕೆ ಸಲುವ ದೆಸೆಯಿಂ ಶ್ರೂೀತ್ರಕ್ಕೆ ಪ್ರಸಾದಲಿಂಗವಾಗಬೇಕಾಯಿತ್ತು. ಇಂತೀ ಪಂಚೇಂದ್ರಿಯಕ್ಕೆ ಪಂಚಲಿಂಗಂಗಳಾಗಬೇಕಾಯಿತ್ತು. ಆತ್ಮನು ನಿರವಯ ನಿರ್ಗುಣ ನಿಃಕಲ ನಿರ್ಭಿನ್ನ ನಿರುಪಮ್ಯನಾದ ದೆಸೆಯಿಂ ಗೋಪ್ಯವಾದ ಆತ್ಮಂಗೆ ಘನಕ್ಕೆ ಘನತೆಯುಳ್ಳ ಮಹಾಲಿಂಗವಾಗಬೇಕಾಯಿತ್ತು. ಇಂತೀ ಷಡುಸ್ಥಲಂಗಳಾದ ದೆಸೆಯಿಂದ ಸೌರಾಷ್ಟ್ರ ಸೋಮೇಶ್ವರನೊರ್ವ ಷಡುಲಿಂಗವಾಗಬೇಕಾಯಿತ್ತಯ್ಯಾ.