Index   ವಚನ - 195    Search  
 
ತನು ಮನ ನೆನಹು, ಹಲವು ನೆನಹಾಗಿ ಜನಿಸಬಲ್ಲವೆ ಆತ್ಮನಿಲ್ಲದಿರಲು? ಉರಿಯಂತಲ್ಲ, ಹಿರಿದಪ್ಪ ನೆಳಲಂತಲ್ಲ, ಜಗದಂತಲ್ಲ, ಮುಗಿಲಂತಲ್ಲ. ಇರುಹೆ ಮೊದಲಾದ ಎಂಭತ್ತುನಾಲ್ಕು ಲಕ್ಷ ಜೀವಜಂತುಗಳಂತಲ್ಲ. ಇವ ಬಿಟ್ಟು ಬೇರೊಂದೆಡೆಯಲಿಪ್ಪುದಲ್ಲ. ತೆರಹಿಲ್ಲದಾತ್ಮಂಗೆ ಕುರುಹೊಂದಿಲ್ಲವಾಗಿ ತೋರಲಿಲ್ಲದಾತ್ಮನ ಬೀರಲಿಲ್ಲಾರಿಗೂ. ನಿಶ್ಶಬ್ದದಿಂ ಶಬ್ದ ಜನಿಸಿ, ಆ ಶಬ್ದ ನಿಶ್ಶಬ್ದದಲ್ಲಿಯೇ ಲಯವಪ್ಪಂತೆ. ಮಾನವಾತ್ಮನ ತಿಳವರಿವೆ ತಿಳಿವು. ಸೌರಾಷ್ಟ್ರ ಸೋಮೇಶ್ವರಲಿಂಗದಲ್ಲಿ ತನ್ನ ತಾನೇ ತನ್ನಿಂ ತನ್ನ ಬೆ[ಳೆ]ಯಬೇಕಯ್ಯಾ ಮಲ್ಲಿಕಾರ್ಜುನಾ.