ತನುವೆಂಬ ಮನೆಗೆ ಆಸ್ಥಿಯ ಗಳು, ನರದ ಭೀಮಗಟ್ಟು,
ಮೂರುವರೆಕೋಟಿ ರೋಮಂಗಳ ಹೊದಿಕೆ
ಮಾಂಸದ ಭಿತ್ತಿಗೆ, ಶುಕ್ಲದ ನೆಲಗಟ್ಟು
ರಕ್ತದ ಸಾರಣೆ, ಮಜ್ಜೆಯ ಕಾರಣೆ,
ನೇತ್ರ ಶ್ರೋತ್ರ ಘ್ರಾಣ ಗುದ ಗುಹ್ಯವೆಂಬವೇ ಗವಾಕ್ಷ,
ಬಾಯ ಬಾಗಿಲಿಗೆ ಅಧರದ ತಾರುಗದ, ದಂತದ ಅಗುಳಿ,
ಇಂತಪ್ಪ ಗೃಹಕ್ಕೆ ದ್ರವ್ಯವಾವದೆಂದಡೆ:
ಕಫ ಪೈತ್ಯವೆಂಬ ಸಯದಾನ, ಸ್ವೇದವೆಂಬ ಅಗ್ಘವಣಿ,
ಅನ್ನಪಾನಂಗಳೆಂಬ ಕಟ್ಟಿಗೆ,
ಉದರಾಗ್ನಿಯಿಂ ಪಾಕವಾಗುತ್ತಂ ಇರಲು,
ಅನುಭವಿಸುವ ಜೀವನು ಮಲಮೂತ್ರವೆಂಬ ವಿತ್ತ
ಇಪ್ಪತ್ತೆರಡು ಸಾವಿರನಾಳದಿಂ ಪ್ರಯವಪ್ಪುದು
ನಿಲಯಾಧಿಪನೆಂಬ ಜೀವಂಗೆ ಮನವೆಂಬ ಸತಿ
ತನ್ಮಾತ್ರೆಗಳೆಂಬ ಸುತರು
ಇಂತಪ್ಪ ಸಂಸಾರಸಾಮಗ್ರಿಯಿಂ ಜೀವಿಸುತ್ತಿರಲು,
ಕಾಲಚಕ್ರಂಗಳು ತಿರುಗಲೊಡನೆ ಜ್ಞಾನಾಗ್ನಿಯಿಂ ಮನೆ ಬೆಂದು,
ಎಲ್ಲರು ಪ್ರಳಯಕ್ಕೊಳಗಾದರು.
ಆನೊಬ್ಬನೆ ಲಿಂಗಸಂಗಿಯಾಗಿ ಉಳಿದೆ ನೋಡಯ್ಯಾ,
ಸೌರಾಷ್ಟ್ರ ಸೋಮೇಶ್ವರಾ.
Art
Manuscript
Music
Courtesy:
Transliteration
Tanuvemba manege āsthiya gaḷu, narada bhīmagaṭṭu,
mūruvarekōṭi rōmaṅgaḷa hodike
mānsada bhittige, śuklada nelagaṭṭu
raktada sāraṇe, majjeya kāraṇe,
nētra śrōtra ghrāṇa guda guhyavembavē gavākṣa,
bāya bāgilige adharada tārugada, dantada aguḷi,
intappa gr̥hakke dravyavāvadendaḍe:
Kapha paityavemba sayadāna, svēdavemba agghavaṇi,
annapānaṅgaḷemba kaṭṭige,
udarāgniyiṁ pākavāguttaṁ iralu,
anubhavisuva jīvanu malamūtravemba vitta
ippatteraḍu sāviranāḷadiṁ prayavappudu
nilayādhipanemba jīvaṅge manavemba sati
tanmātregaḷemba sutaru
Intappa sansārasāmagriyiṁ jīvisuttiralu,
kālacakraṅgaḷu tirugaloḍane jñānāgniyiṁ mane bendu,
ellaru praḷayakkoḷagādaru.
Ānobbane liṅgasaṅgiyāgi uḷide nōḍayyā,
saurāṣṭra sōmēśvarā.