Index   ವಚನ - 234    Search  
 
ನಿರಿಂದ್ರಿಯನಾದ ಶಿವನು ತಾನೇ ದೇವದೇಹಿಕ ಭಕ್ತನಾಗಿ `ಅನ್ಯಪೂಜಾವಿನಿರ್ಮುಕ್ತೋ ಭಕ್ತೋ ಜಂಗಮಪೂಜಕಃ' ಅನ್ಯಪೂಜೆಯಂ ಬಿಟ್ಟು ಜಂಗಮಲಿಂಗವನೆ ಪೂಜಿಸುವಂಥ ಭಕ್ತ ಲಿಂಗೇಂದ್ರಿಯ ಮುಖದಿಂದವೇ ಸಕಲಭೋಗಂಗಳ ಭೋಗಿಸುವನು.ಅದೆಂತೆಂದಡೆ: ಜ್ಯೋತಿಯ ಮುಖದಲ್ಲಿ ರಜ್ಜು ತೈಲವನವಗ್ರಹಿಸುವಂತೆ, ಸಕಲದ್ರವ್ಯಂಗಳ ಅಗ್ನಿಯ ಮುಖದಲ್ಲಿ ನಿರ್ಜರರು ತೃಪ್ತಿಯನೆಯ್ದುವಂತೆ, ಸದ್ಬಕ್ತರ ಹೃದಯದಲ್ಲಿ ತೃಪ್ತಿಯನೆಯ್ದಿಪ್ಪನು ಶಿವನು. ಇದು ಕಾರಣ ಶಿವಭಕ್ತನಿರ್ದುದೆ ಅವಿಮುಕ್ತಕ್ಷೇತ್ರ. ಆತನ ಶಿರವೆ ಶ್ರೀಪರ್ವತ, ಭಾಳವೇ ಕೇತಾರ, ಭ್ರೂಮಧ್ಯವೇ ವಾರಣಾಸಿ, ನೇತ್ರವೇ ಪ್ರಯಾಗ, ಸರ್ವೇಂದ್ರಿಯಂಗಳೇ ಸರ್ವತೀರ್ಥಂಗಳು, ಪಾದವೇ ಅಷ್ಟಾಷಷಿ* ಕ್ಷೇತ್ರಂಗಳು, ಇಂತಪ್ಪ ಪವಿತ್ರಗಾತ್ರನ ಕಾಯವೇ ಕೈಲಾಸ. ಇಂತಪ್ಪ ಸದ್ಭಕ್ತನನೆನಗೆ ತೋರಿಸಿ ಬದುಕಿಸಾ ಸೌರಾಷ್ಟ್ರ ಸೋಮೇಶ್ವರಾ.