Index   ವಚನ - 261    Search  
 
ಪೃಥ್ವಿಯ ಕಠಿಣವಳಿದ ಭಕ್ತಂಗೆ ಜಾಗ್ರಾವಸ್ಥೆಯಿಲ್ಲ. ಅಪ್ಪುವಿನ ಮೃದುವಳಿದ ಮಾಹೇಶ್ವರಂಗೆ ಸ್ವಪ್ನಾವಸ್ಥೆಯಿಲ್ಲ. ಅಗ್ನಿಯ ಉಷ್ಣವಳಿದ ಪ್ರಸಾದಿಗೆ ಸುಷಪ್ತ್ಯವಸ್ಥೆಯಿಲ್ಲ. ವಾಯುವಿನ ಗಮನವಳಿದ ಪ್ರಾಣಲಿಂಗಿಗೆ ತುರೀಯಾವಸ್ಥೆಯಿಲ್ಲ. ಆಕಾಶದ ಶಬ್ದಗುಣವಳಿದ ಶರಣಂಗೆ ತುರೀಯಾತೀತ ನಿರವಸ್ಥೆಯಿಲ್ಲ. ಆತ್ಮತೇಜದ ಮೂಲಾಹಂಕಾರವಳಿದ ಐಕ್ಯಂಗೆ ಇನಿತೆನಿತೇನೂ ಇಲ್ಲ. ಸೌರಾಷ್ಟ್ರ ಸೋಮೇಶ್ವರನಂಗಂಗೊಂಡ ಸುರಾಳ ನಿರಾಳ ನಿರವಯ ಧ್ಯಾನಾತೀತ ಮನಾತೀತ ಭಾವಾತೀತ ಜ್ಞಾನಾತೀತ ಅಗೋಚರ ಅತ್ಯತಿಷ್ಠದ್ದಶಾಂಗುಲಂ.