Index   ವಚನ - 266    Search  
 
ಪ್ರಸಾದ ಪ್ರಸಾದವೆಂಬರು, ಪ್ರಸಾದವಾವುದೆಂದರಿಯರು. ಅನ್ನವೆ ಪ್ರಸಾದವೆಂದು ಕೊಡುವಾತ ಶರಣನಲ್ಲ. ಅನ್ನವೆ ಪ್ರಸಾದವೆಂದು ಕೊಂಬಾತ ಭಕ್ತನಲ್ಲ. ಅದೆಂತೆಂದಡೆ: ಅನ್ನ ಮಹಾರೇತ್ಸರ್ವಮನ್ನಮುತ್ಪತ್ತಿಹೇತವೇ ಅನ್ನಮಾಭ್ಯಂತರಂ ಪ್ರಾಣಂ ಸರ್ವಮನ್ನಮಯಂ ಜಗತ್ ಇಂತೆಂದುದಾಗಿ, ಅನ್ನ ಜೀವಕ್ಕೆ ಆಧಾರ, ಅನ್ನವೇ ಸರ್ವಜನಕ್ಕೆ ಸನ್ಮತ. ಇದು ಕಾರಣ, ಅನ್ನವೆ ಪ್ರಸಾದವಲ್ಲ. ಶರಣನಪ್ಪ ಸದ್ಗುರುಸ್ವಾಮಿ ನೆತ್ತಿಯಲ್ಲಿರ್ದ ಉತ್ತಮ ಪ್ರಸಾದವನರು[ಹಿ] ಬ್ರಹ್ಮರಂಧ್ರದಲ್ಲಿ ಪ್ರಕಾಶಿಸುತಿರ್ಪ ಮಹಾಲಿಂಗದೊಳ್ಪುಟ್ಟಿದ ಪರಮಾಮೃತವೆ ಪ್ರಸಾದ. ಅಂತಪ್ಪ ಪ್ರಸಾದಗ್ರಾಹಕತ್ವವೆಂತಪ್ಪುದೆಂದಡೆ, ಅಂಗವ ಮರೆದು ಮನಮಗ್ನವಾಗಿ ಉಚ್ಛ್ವಾಸ ನಿಶ್ವಾಸಂಗಳಡಗಿ, ಪ್ರಾಣನು ಪ್ರಸಾದದೊಳ್ಮುಳುಗಿ ಪರಮಕಾಷ್ಠಯನೆಯ್ದಿ ನಿಂದಾತನೆ, ಸೌರಾಷ್ಟ್ರ ಸೋಮೇಶ್ವರನಲ್ಲಿ ಮಹಾಪ್ರಸಾದಿ ಎನಿಸಿಕೊಂಬನು.