ಬ್ರಹ್ಮಜ್ಞಾನದಿಂದ ಬ್ರಹ್ಮವನರಿತರಿವು
ಆ ಪರಬ್ರಹ್ಮದೊಡವೆರಸಿ ನಿಂದಿತ್ತು. ಅದೆಂತೆಂದಡೆ:
ಬ್ರಹ್ಮಬ್ರಹ್ಮಾಂಡ ಬೇರಿಲ್ಲದಿಪ್ಪಂತೆ, ಆಕಾಶವನಿಲ ಬೇರಿಲ್ಲದಿಪ್ಪಂತೆ,
ಹಣ್ಣು ರುಚಿ ಬೇರಿಲ್ಲದಿಪ್ಪಂತೆ.
ದ್ವೈತವೆ ಅದ್ವೈತವಾದ ಬಳಿಕ ದ್ವೈತವೆಂದೆನಲುಂಟೆ? ಇಲ್ಲವಾಗಿ.
ಅರಿವು ಮರಹಿಗೆ ತೆರಹಿಲ್ಲದ ಕರಿಗೊಂಡರಿವು ತಾನಾಗಿರಲು
ನಾನಾ ಪರಿಯ ವಿಚಿತ್ರಚಿತ್ರಂಗಳತ್ಯಾಶ್ಚರ್ಯವಪ್ಪಂತೆ ತೋರುತಿರಲು
ಅದು ವಿಪರೀತವೆಂದೆನಲುಂಟೆ?
ಮುನ್ನ ತಾನಾಗಿರರ್ದು ಇನ್ನು ಬೇರೆನಲುಂಟೆ? ಇಲ್ಲವಾಗಿ.
ಆದಿಮಧ್ಯಾಂತ ವಿರಹಿತವಾದ ಮಹಾಘನವೆ
ಊಹಿಸಲಿಲ್ಲದ ಉಪಮೆ, ಭಾವಿಸಲಿಲ್ಲದ ಭಾವ,
ಅರಿಯಲಿಲ್ಲದರಿವು ತಾನಾಗಿ,
ಸೌರಾಷ್ಟ್ರ ಸೋಮೇಶ್ವರನೆಂಬ ನುಡಿಯನೊಳಕೊಂಡು ನಿಂದ
ಸಹಜ ಭರಿತವಾಗಿರ್ದಿಲ್ಲದಂತೆ
ಇಹ ಭೇದವನೇನೆಂಬೆನಯ್ಯಾ.