Index   ವಚನ - 289    Search  
 
ಭಕ್ತಿಯಾಚಾರದ ಪಥವಿಡಿದು ನಲಿನಲಿದುಲಿದಡೂ ಲಿಂಗಸಾಹಿತ್ಯವಿಲ್ಲ. ಮನವೆ ಲಿಂಗದಲ್ಲಿ ನೆಲೆಗೊಳಿಸುವೆನೆಂದು ಧ್ಯಾನಮೌನದಲ್ಲಿ ನಿಂತಡೂ ಲಿಂಗಸಾಹಿತ್ಯವಿಲ್ಲ. ಸರ್ವಪ್ರಪಂಚುಗಳು ವಾಯುವಿಂದ ತೋರುತ್ತಿರಲು ಆ ಪ್ರಪಂಚನಳಿದು ಲಿಂಗವನೊಡೆವೆರಸುವೆನೆಂದು ಶ್ವಾಸ ನಿಃಶ್ವಾಸಂಗಳ ಪಿಡಿದು ನಿಲಿಸಿದರೂ ಲಿಂಗಸಾಹಿತ್ಯವಿಲ್ಲ. ಸದ್ಭಕ್ತಿವೆತ್ತು ಭಾವಪ್ರಸಂಗದಿಂ ಕಂಗಳಂ ಕಳೆದು, ಜಿಹ್ವೆಯಂ ಕೊಯಿದು ಶಿರವನರಿದು, ಹಸ್ತವನುತ್ತರಿಸಿತ್ತಡೂ ಲಿಂಗಸಾಹಿತ್ಯವಿಲ್ಲ. ಯಮ, ನಿಯಮ, ಆಸನ, ಪ್ರಾಣಾಯಾಮ, ಪ್ರತ್ಯಾಹಾರ, ಧ್ಯಾನ, ಧಾರಣ, ಸಮಾಧಿ ಎಂಬ ಅಷ್ಟಾಂಗಯೋಗ ಘಟ್ಟಿಗೊಂಡು, ಪ್ರಾಣ ಮನ ಪವನ ಹುರಿಗೂಡಿ, ಆಧಾರ ಸ್ವಾಧಿಷ್ಠಾನ ಮಣಿಪೂರಕ ಅನಾಹತ ವಿಶುದ್ಧಿ ಆಜ್ಞೇಯವೆಂಬ ಷಡಾಧಾರದ ಬಳಿವಿಡಿದು, ನೆತ್ತಿಯಿಂದುತ್ತರಕ್ಕೆ ಉಚ್ಚಳಿಸಿ ಹಾಯಿದು, ನಡುನೆತ್ತಿ ತೂತಾದಡೂ ಲಿಂಗಸಾಹಿತ್ಯವಿಲ್ಲ. ಸತ್ಯ, ಸಮತೆ, ಸಮಾಧಾನ, ಸದ್ಭಾವ, ಸವಿರಕ್ತಿಯಿಂದತ್ಯಾನಂದ ತೋರುತ್ತಿರಲು ಅದು ನೆಲೆಗೊಂಡು ನಿಲ್ಲದಾಗಿ ಹೇಳದೆ ಬಂದು ಕೇಳದೆ ಹೋಯಿತ್ತು. ಸೌರಾಷ್ಟ್ರ ಸೋಮೇಶ್ವರನ ನಿಜವನರಿಯದೆ ಅನುಭವವ ಮಾಡಿ ಫಲವೇನಯ್ಯಾ ?