ವಿಶ್ವ ತೈಜಸ ಪ್ರಾಜ್ಞವೆಂಬ ಜೀವತ್ರಯವಿಡಿದ
ಸ್ಥೂಲ ಸೂಕ್ಷ್ಮ ಕಾರಣ ತನುವಿನ
ಸುಬುದ್ಧಿ ಸುಮನ ಸದ್ಭಾವವೆಂಬ ಹಸ್ತದಿಂ
ಕರ್ಮ ಭಕ್ತಿ ಜ್ಞಾನ ತತ್ವದಿಂದೊದಗಿದ ಪದಾರ್ಥವ
ಇಷ್ಟ ಪ್ರಾಣ ತೃಪ್ತಿಲಿಂಗಕ್ಕೆ
ಕಾಯಾರ್ಪಣ ಕರಣಾರ್ಪಣ
ಭಾವಾರ್ಪಣದಿಂದರ್ಪಿಸಿಕೊಂಬ
ಪ್ರಸಾದ ಪಿಂಡೇಂದ್ರಿಯದ್ವಾರ ಸಂಚಲಕ್ಕವಧಿಯಾಯಿತ್ತು.
ಪಿಂಡ ಬ್ರಹ್ಮಾಂಡವ ಮೀರಿ
ತೋರುವ ಮಹಾಘನವೆ ನಿಜವಾಗಿ
ನಿಜವಗಣಿತ ಅನುಪಮ ಅತಕ್ರ್ಯ
ಅದ್ವಯಲಿಂಗಕ್ಕೆ ಅರ್ಪಿಸಲೊಂದಿಲ್ಲ,
ಅನರ್ಪಿತ ಹೊದ್ದದಾಗಿ.
ಸೌರಾಷ್ಟ್ರ ಸೋಮೇಶ್ವರಾ,
ನಿಮ್ಮ ಶರಣರು ಅಚ್ಚ ಪ್ರಸಾದಿಗಳು.