ವೀರಶೈವ, ಶುದ್ಧಶೈವವೆಂಬುಭಯ ಪಕ್ಷದ
ನಿರ್ಣಯ ನಿಷ್ಪತ್ತಿಯೆಂತೆಂದಡೆ:
ಮಲ ಮಾಯಾ ಮಲಿನವನು
ಶ್ರೀಗುರು ತನ್ನ ಕೃಪಾವಲೋಕನದಿಂದದನಳಿದು,
ನಿರ್ಮಲನಾದ ಶಿಷ್ಯನ ಉತ್ತಮಾಂಗದಲ್ಲಿಹ ಪರಮಚಿತ್ಕಳೆಯನು
ಹಸ್ತಮಸ್ತಕಸಂಯೋಗದ ಬೆಡಗಿನಿಂದ ತೆಗೆದು,
ಆ ಮಹಾಪರಮ ಕಳೆಯನು ಸ್ಥಲದಲ್ಲಿ ಕೂಡಿ,
ಮಹಾಲಿಂಗವೆಂದು ನಾಮಕರಣಮಂ ಮಾಡಿ,
ಶಿಷ್ಯನಂಗದ ಮೇಲೆ ಬಿಜಯಂಗೆಯಿಸಿ,
ಕರ್ಣದ್ವಾರದಲ್ಲಿ ಪ್ರಾಣಂಗೆ ಆ ಮಹಾಲಿಂಗವ ಜಪಿಸುವ
ಪ್ರಣವಪಂಚಾಕ್ಷರಿಯನು ಪ್ರವೇಶವಂ ಮಾಡಿ,
ಅಂಗಪೀಠದಲ್ಲಿರಿಸಿ, ಅಭಿನ್ನಪ್ರಕಾಶವಾದ ಪೂಜೆಯ ಮಾಡಹೇಳಿದನು,
ಇದೀಗ ವೀರಶೈವದ ಲಕ್ಷಣವೆಂದರಿವುದು.
ಇನ್ನು ಶುದ್ಧಶೈವಂಗೆ ಗುರು ತನ್ನ ನಿರೀಕ್ಷಣ ಮಾತ್ರದಲ್ಲಿ
ಅವನ ಶುದ್ಧಾಂಗನ ಮಾಡಿ,
ಆತನ ಕರ್ಣದ್ವಾರದಲ್ಲಿ ಪಂಚಾಕ್ಷರಿಯನುಪದೇಶವಂ ಮಾಡಿ,
ಸ್ಥಾವರಲಿಂಗಪೂಜಕನಾಗಿರೆಂದು ಲಿಂಗವನು ಕೊಟ್ಟು,
ಭೂಪೀಠದಲ್ಲಿರಿಸಿ ಅರ್ಚನೆ ಪೂಜನೆಯ ಮಾಡೆಂದು ಹೇಳಿದನು.
ಹೇಳಲಿಕ್ಕಾಗಿ ಶುದ್ಧಶೈವನೆ ಪೀಠದಲ್ಲಿರಿಸಿ
ಭಿನ್ನಭಾವಿಯಾಗಿ ಅರ್ಚನೆ ಪೂಜೆನೆಯಂ ಮಾಡುವನು.
ವೀರಶೈವನು ಅಂಗದ ಮೇಲೆ ಧರಿಸಿ ಅಭಿನ್ನಭಾವದಿಂದ
ಅರ್ಚನೆ ಪೂಜನೆಯಂ ಮಾಡುವನು.
ಶುದ್ಧಶೈವಂಗೆ ನೆನಹು, ವೀರಶೈವಂಗೆ ಸಂಗವೆಂತೆಂದಡೆ:
ಅತ್ಯಂತ ಮನೋರಮಣನಪ್ಪಂತಹ ಪುರುಷನ ಒಲುಮೆಯಲ್ಲಿಯ ಸ್ತ್ರೀಗೆ
ನೆನಹಿನ ಸುಖದಿಂದ ಸಂಗಸುಖವು ಅತ್ಯಧಿಕವಪ್ಪಂತೆ
ಶುದ್ಧಶೈವದ ನೆನಹಿಂಗೂ ವೀರಶೈವದಲ್ಲಿಯ ಸಂಗಕ್ಕೂ ಇಷ್ಟಂತರ.
ಆ ಲಿಂಗದಲ್ಲಿ ಶುದ್ಧಶೈವನ ನೆನಹು ನಿಷ್ಪತ್ತಿಯಾದಡೆ ಸಾರೂಪ್ಯನಹನು.
ಆ ಲಿಂಗದಲ್ಲಿ ವೀರಶೈವನ ನೆನಹು
ನಿಷ್ಪತ್ತಿಯಾದಡೆ ಸಾಯುಜ್ಯನಹನು
ಅದು ಕಾರಣ, ಸ್ಥಾವರಲಿಂಗದ ಧ್ಯಾನಕ್ಕೂ
ಪ್ರಾಣಲಿಂಗದ ಸಂಗಕ್ಕೂ ಇಷ್ಟಂತರ.
ಸ್ಥಾವರಲಿಂಗದ ಧ್ಯಾನದಿಂದ ಸಾರೂಪ್ಯಪದವನೈದಿದ ತೆರನೆಂತೆಂದಡೆ:
ಕೀಟನು ಭ್ರಮರಧ್ಯಾನದಿಂದ ಆ ಭ್ರಮರರೂಪಾದಂತೆ
ಶೈವನು ಶಿವಧ್ಯಾನದಿಂದ ಶಿವನ ಸಾರೂಪ್ಯಪದವನೈದಿ
ಇದಿರಿಟ್ಟು ಭಿನ್ನಪದದಲ್ಲಿರುತ್ತಿಹನು.
ಮತ್ತಂ, ವೀರಶೈವನು ಜಂಗಮಾರ್ಚನೆಯಂ ಮಾಡಿ
ಪ್ರಾಲಿಂಗಸಂಬಂಧದಿಂ ಸಾಯುಜ್ಯಪದವನೆಯ್ದಿದ ತೆರನೆಂತೆಂದಡೆ:
ಅಗ್ನಿಯ ಸಂಗವ ಮಾಡಿದ ಕರ್ಪುರ ನಾಸ್ತಿಯಾದ ಹಾಂಗೆ,
ಈತನು ಶಿವನಲ್ಲಿ ಸಾಯುಜ್ಯಪದವನೈಯ್ದಿ
ರೂಪುನಾಸ್ತಿಯಾಗಿ ಶಿವನೆಯಹನು.
ಇದು ಕಾರಣ ಶುದ್ಧಶೈವ ವೀರಶೈವದಂತರ ಮಹಾಂತರ,
ಈ ಪ್ರಕಾರ ಕಾಣಾ, ಸೌರಾಷ್ಟ್ರ ಸೋಮೇಶ್ವರಾ.