Index   ವಚನ - 340    Search  
 
ಶಿವಪಥವನರಿದು, ಲಿಂಗನಿಷ್ಠೆಯಿಂದೇಕೋಭಾವ ಬಲಿದು, ಕರಿಗೊಂಡು, ಘನವೇದ್ಯವಾಗಿ ನಿಂದು, ನಿಜವ ನೆಮ್ಮಿ, ಸಚ್ಚಿದಾನಂದಸುಖಮಯನಾಗಿ, ಮಾಯೆ ಕೆಟ್ಟು, ಮರವೆ ಬಿಟ್ಟು, ಮರಣವಳಿಯಬೇಕು. ಇದಲ್ಲದೆ ಬಿಂದುವಿಂದಾದ ತ್ರಿಬದ್ಧಕ್ರಿಯೆ ಎಂದರಿಯದೆ ಬಾಹ್ಯಕ್ರೀಯೊಳೊಂದಿದಡೆ, ಸುರಪ, ಹರಿ, ವಿರಿಂಚಿಗಳಾದಡೂ ಮಾಯೆ ಕೆಡದು, ಮರವೆ ಬಿಡದು. ಮೃತ್ಯುವಗಿದು ಕಾಲನ ಬಾಯಿಗೆ ಕೆಡಹದೆ ಮಾಣದಯ್ಯಾ. ಇದ ಬಲ್ಲೆನಾಗಿ ನಾನೊಲ್ಲೆ, ಸೌರಾಷ್ಟ್ರ ಸೋಮೇಶ್ವರಾ.