Index   ವಚನ - 350    Search  
 
ಶುದ್ಧ ಮಿಶ್ರ ಸಂಕೀರ್ಣ ಪೂರ್ವ ಮಾರ್ಗಶೈವಂಗಳಲ್ಲಿ ಕರ್ಮಭಕ್ತಿಯಲ್ಲದೆ ನಿರ್ಮಳಸದ್ಭಕ್ತಿಯೆಲ್ಲಿಯದೊ ? ಒಮ್ಮೆ ಧರಿಸಿ ಒಮ್ಮೆ ಇರಿಸಿ, ಶುಚಿಯಾದೆನೆಂದು ಅಶುಚಿಯಾದೆನೆಂದು ಭವಿಯಾಗುತ್ತೊಮ್ಮೆ, ಭಕ್ತನಾಗುತ್ತೊಮ್ಮೆ ಒಪ್ಪಚ್ಚಿ ಹೊಲೆ, ಒಪ್ಪಚ್ಚಿ ಕುಲವೆಂದು ತೆರನರಿಯದಿಪ್ಪ ಬರಿಯ ಶುದ್ಧಶೈವವಂ ಬಿಟ್ಟು, ಬ್ರಹ್ಮ ವಿಷ್ಣು ರುದ್ರ ಮಾಹೇಶ್ವರರು ಒಂದೆಂದು ನುಡಿವ ದುಃಕರ್ಮ ಮಿಶ್ರವಂ ಬಿಟ್ಟು, ಹರನೆ ಹಿರಿಯನೆಂದು ಕಿರಿಯರೆಲ್ಲಾ ದೇವರೆಂದು ನುಡಿದು ಕಂಡ ಕಂಡವರ್ಗೆ ಹೊಡೆಗೆಡವ ವೇಶಿಯ ಸುತನಂತೆ ಸಂಕೀರ್ಣಕ್ಕೊಳಗಾದ ಸಂಕೀರ್ಣಶೈವಮಂ ನೋಡದೆ, ದೂರದಿಂ ನಮಿಸಿ ಅರ್ಪಿಸಿ ಶೇಷವರುಣಕರ್ತನಲ್ಲವೆಂದು ದೂರಸ್ತನಹ ಪೂರ್ವಶೈವಮಂ ತೊಲಗಿ, ಅಂಗದಲನವರತ ಲಿಂಗಮಂ ಧರಿಸಿರ್ದು ದೇಹೇಂದ್ರಿಯ ಮನಃ ಪ್ರಾಣ ಜ್ಞಾನ ಭಾವ ಒಮ್ಮುಖಮಂ ಮಾಡಿ, ಸದ್ಗುರುಕಾರುಣ್ಯಮಂ ಪಡೆದು, ಲಿಂಗವೇ ಪತಿ, ಗುರುವೆ ತಂದೆ, ಜಂಗಮವೇ ಲಿಂಗವೆಂದರಿದು, ದ್ರವ್ಯವೆಂಬುದು ಭೂತರೂಪು, ಪ್ರಸಾದವೆಂಬುದು ಲಿಂಗರೂಪವೆಂದು ತಿಳಿದು, ಲಿಂಗದ ಪಾದೋದಕವೇ ಲಿಂಗಕ್ಕೆ ಮಜ್ಜನವಾಗಿ ಲಿಂಗದ ಪ್ರಸಾದವೇ ಲಿಂಗಕ್ಕೆ ಆರೋಗಣೆಯಾಗಿ ಲಿಂಗದಿಂದ ನೋಡುತ್ತ ಕೇಳುತ್ತ ರುಚಿಸುತ್ತ ಮುಟ್ಟುತ್ತ ವಾಸಿಸುತ್ತ ಕೊಡುತ್ತ ಆನಂದಿಸುತ್ತ ಅಹಂ ಮಮತೆಗೆಟ್ಟು ಸಂದು ಸಂಶಯವರಿತು ಹಿಂದು ಮುಂದ ಹಾರದಿಪ್ಪುದೆ ವೀರಶೈವ. ಅದೆಂತೆಂದಡೆ: ಪಿತಾ ಗುರುಃ ಪತಿರ್ಲಿಂಗಂ, ಸ್ವಲಿಂಗಂ ಜಂಗಮಪ್ರಭುಃ ತಸ್ಮಾತ್ಸರ್ವಪ್ರಯತ್ನೇನ ತಸ್ಯೈವಾರಾಧನಂ ಕ ರು ಸ ಏವ ಸ್ಯಾತ್ಪ್ರಸಾದಸ್ತೇ ಭಕ್ತಿವಿತ್ತಸಮರ್ಪಿತಃ ತತ್ಪ್ರಸಾದಸ್ತು ಭೋಕ್ತವ್ಯಃ ಭಕ್ತೋವಿಗತಕಲ್ಮಷಃ ಎಂದುದಾಗಿ, ಇಂತಲ್ಲದಿರ್ದುದೆ ಇತರ ಶೈವ ಕಾಣಾ, ಸೌರಾಷ್ಟ್ರ ಸೋಮೇಶ್ವರಾ.