Index   ವಚನ - 351    Search  
 
ಶುದ್ಧಶೈವದ ನಿರ್ಧರವನರಿವ ಬುದ್ಧಿಯನನುಕರಿ[ಸೆ] ಆ ಶುದ್ಧಶೈವದ ಪರಿಯೆಂತೆಂದಡೆ: ಏಕಮೇವನದ್ವಿತೀಯಂ ಬ್ರಹ್ಮವೆಂಬು[ದ] ಶ್ರುತಿಪ್ರಮಾಣಿಂದರಿದು ಅಂತಪ್ಪ ಶಿವನಲ್ಲಿ ಏಕನಿಷೆ*ಯ ಪಡೆದು ಆ ಶಿವಂಗೆ ಅರ್ಚನೆ ಪೂಜನೆಯಂ ಮಾಡುವಲ್ಲಿ ದುರ್ಗಿ, ವಿನಾಯಕ, ಭೈರವ ಮೊದಲಾದ ಪರಿವಾರ ದೇವತೆಗಳನ್ನು ಏಕಪೀಠದಲ್ಲಿ ಪೂಜೆಯಂ ಮಾಡುವಾತನು ಅವಿವೇಕದ ಅಪರಾಧಿಯಲ್ಲದೆವಿವೇಕವನುಳ್ಳ ಶೈವಸಂಪನ್ನನಲ್ಲ. ಅದಕ್ಕೆ ದೃಷ್ಟಾಂತವೆಂತೆಂದಡೆ: ಅರಸು ಕುಳ್ಳಿರುವ ಸಿಂಹಾಸನದಲ್ಲಿ ಪ್ರಧಾನ ಮೊದಲಾದ ಪರಿವಾರ ಕುಳ್ಳಿರಬಹುದೆ ? ಬಾರದಾಗಿ, ಪರಿವಾರ ದೇವತೆಗಳಿಗೆ ಏಕ ಪೀಠ ಸಲ್ಲದು. ಮುನ್ನ ಅರುವತ್ತುಮೂವರು ಮೊದಲಾದ ಅಸಂಖ್ಯಾತರೆನಿಪ ಭಕ್ತರುಗಳು ಶುದ್ಧಶೈವ ವೀರಶೈವದಲ್ಲಿ ನಿಷೆ*ಯ ಆಚರಿಸುವಲ್ಲಿ ಏಕಲಿಂಗದಲ್ಲಿ ನಿಷ, ಶಿವಭಕ್ತರಲ್ಲಿ ಪ್ರೇಮ, ಶಿವಲಾಂಛನವ ಧರಿಸಿಪ್ಪ ಜಂಗಮವನು ಶಿವನೆಂದು ಕಂಡು ಅವರಿಗೆ ತೃಪ್ತಿಪಡಿಸಿದವರಾಗಿ ಚತುರ್ವಿಧವನೆಯ್ದಿದರು. ಅದೆಂತೆಂದಡೆ: ವೃಕ್ಷಸ್ಯ ವದನಂ ಭೂಮಿಃ ಸ್ಥಾವರಸ್ಯ ಚ ಜಂಗಮಃ ಮಮ ತೃಪ್ತಿರುಮಾದೇವಿ ಜಂಗಮಸ್ಯಾನನಾದ್ಭವಃ ಅಸ್ಯಾರ್ಥ, ಮರಕ್ಕೆ ಬೇರು ಬಾಯಿ ಹೇಗೆಯಾಯಿತ್ತು ಹಾಂಗೆ ಲಿಂಗಕ್ಕೆ ಜಂಗಮವೆ ಬಾಯಿಯೆಂದು ಆವನಾನೊರ್ವನು ಜಂಗಮಕ್ಕೆ ತೃಪ್ತಿಪಡಿಸುತ್ತಂ ಇದ್ದಾನು, ನಾನು ತೃಪ್ತನು ಕಾಣಾ ಉಮಾದೇವಿ ಎಂದು ಶಿವನು ಹೇಳಿದನಾಗಿ ಮತ್ತಂ, ಶಿವಯೋಗಿಮುಖೇನೈವ ಸಾಕ್ಷಾದ್ಭುಂಕ್ತೇ ಸದಾಶಿವಃ ಶಿವಯೋಗಿಶರೀರಾನ್ತೇ ನಿತ್ಯಂ ಸನ್ನಿಹಿತಃ ಶಿವಃ ಆವನೊರ್ವ ಶಿವಯೋಗಿಗೆ ಆವನೊರ್ವ ಭಕ್ತನು ತೃಪ್ತಿ ಪಡಿಸುತ್ತಂ ಇದ್ದಾನು, ಅದೇ ಶಿವನ ತೃಪ್ತಿಯೆಂದು ಅರಿವುದು. ಅದು ಹೇಗೆಂದಡೆ: ಶಿವಯೋಗಿಯ ಹೃದಯಕಮಲಮಧ್ಯದಲ್ಲಿ ಶಿವನು ಆವಾಗಲೂ ತೊಲಗದಿಹನಾಗಿ, ಮತ್ತಾ ಶಿವಂಗೆ ಲಿಂಗ ಒಂದು ಮುಖ, ಜಂಗಮ ಒಂದು ಮುಖ. ಅದಕ್ಕೆ ಈಶ್ವರ ವಾಕ್ಯ: ಯಥಾ ಭೇರುಂಡಪಕ್ಷೀ ತು ದ್ವಿಮುಖಾತ್ ಪರಿಭುಂಜತೇ ತಥಾ ಭುಂಜಾಮಿ ದ್ವಿಮುಖಾಲ್ಲಿಂಗಜಂಗಮಯೋರಹಂ ಅಸ್ಯಾರ್ಥ, ಆವುದಾನೊಂದು ಭೇರುಂಡ ಪಕ್ಷಿ ಎರಡು ಮುಖದಲ್ಲಿ ಹಾರವ ಕೊಳಲು ಒಂದೇ ದೇಹಕ್ಕೆ ತೃಪ್ತಿಯಹ ಹಾಂಗೆ ಎನಗುಳ್ಳವು ಲಿಂಗ ಜಂಗಮವೆರಡು ಮುಖ. ಆ ಎರಡು ಮುಖಕ್ಕೆ ಆವನಾನೊರ್ವನು ನೈವೇದ್ಯವ ನೀಡುತ್ತಂ ಇದ್ದಾನು, ಅದು ಎನ್ನ ತೃಪ್ತಿಯೆಂದು ಶಿವನು ದೇವಿಯರಿಗೆ ಹೇಳಿದನಾಗಿ ಇಂತಪ್ಪ ಲಿಂಗಜಂಗಮವೆರಡು ಮುಖವೆ ಶಿವನ ತೃಪ್ತಿಗೆ ಕಾರಣವೆಂದರಿದು ಆಚರಿಸಿದರಾಗಿ ವೀರಶೈವಸಂಪನ್ನರುಮಪ್ಪ ಅರುವತ್ತುಮೂವರು ಅಸಂಖ್ಯಾತರು ಶಿವನಲ್ಲಿ ಚತುರ್ವಿಧ ಪದವಿಯನೆಯ್ದಿ ಸುಖಿಯಾದರು. ಇದೀಗ ಶುದ್ಧಶೈವದ ಮಾರ್ಗ. ಈ ಶೈವಸಂಪತ್ತನರಿದಾಚರಿಸಿದವರೆ ಮುಕ್ತರು ಸೌರಾಷ್ಟ್ರ ಸೋಮೇಶ್ವರಾ.