ಹೀನಬುದ್ಧಿಯ ಕರ್ಮದ ಕ್ಷೀಣ ಬಣ್ಣವ ಬಿಟ್ಟು
ಪ್ರಾಣಸಂಗತವಾದ ಧಾತು ಬಣ್ಣ ವೇಳಕ್ಕೆ
ಜ್ಞಾತೃ ಬಣ್ಣದಾಣಿಯನಿಕ್ಕಿ ಕಳೆದು
ಜ್ಞಾನ ಕರ್ಮದ ಬಣ್ಣ ಹತ್ತಕ್ಕೆ ಜ್ಞೇಯ ಬಣ್ಣವ ಶಕವನಿಕ್ಕಿ ಕಳೆದು
ಕ್ರಿಯಾ ಬಣ್ಣದ ಹಲವು ಬಣ್ಣವ ಕೊಡದೆ
ಶುದ್ಧಾಶುದ್ಧ ಬಣ್ಣಕ್ಕೆ ಮುಖ್ಯ ಬಣ್ಣದಲ್ಲಿ ಚಿದ್ಬಣ್ಣವ ಕೂಡಲು
ಇದಾವ ಬಣ್ಣವೆಂದರಿಯಬಾರದೆ ವರ್ಣಾತೀತವಾಯಿತ್ತು.
ಇದಕ್ಕೆ ಶ್ರುತಿ:
ವರ್ಣಾತೀತಂ ಮನೋತೀತಂ ಭಾವಾತೀತಂ ತು ತತ್ಪದಂ
ಜ್ಞಾನಾತೀತಂ ನಿರಂಜನಂ ತತ್ಕಲಾ ಸೂಕ್ಷ್ಮಭಾವತಃ
ಇಂತೆಂದುದಾಗಿ,
ಸೌರಾಷ್ಟ್ರ ಸೋಮೇಶ್ವರ ಲಿಂಗದ ಬಣ್ಣ ಅಂತರ್ಬಾಹ್ಯ
ಗಮ್ಯಾಗಮ್ಯ ಭಾವಾಭಾವತೀತಾತೀತವಲ್ಲದೆ ನಿಂದಿತ್ತು.