ಹೊನ್ನೆಯ ಹುಳವ ಕಂಡು
ಕುನ್ನಿ ತನ್ನ ಬಾಲವ ಸುಟ್ಟುಕೊಂಡಲ್ಲಿ
ತೊನ್ನಾಗಿ ಹುಳಿತು ಕೊಳತು ಹೋಗುವುದಲ್ಲದೆ
ಹೊನ್ನೆಯಂತೆ ಹೊಳವುದೆ?
ಧನ್ಯರಾಗಬೇಕು ಭಕ್ತರ ನುಡಿ ನಡೆಯ ಕೇಳಿ ಕಂಡು
ಇನ್ನು ಹೊಲುವೆಗೆ ವೇಷವ ತಾಳಿದರೆ ಕ್ಲೇಶ ತೊಳವುದೆ?
ದಿನ್ನಾರಿಯ ಹೊನ್ನಿನ ತೂಕ ಬಣ್ಣ ಹೊನ್ನಿಗುಂಟೆ?
ಸನ್ನಹಿತ ಲೋಕಕ್ಕೆ ಸಂಗನ ಶರಣ ವಿರಹಿತ
ಇನ್ನವರ ಪ್ರಭೆ ಸರ್ವಕ್ಕೆ ಕೀಳಾದ ಬಳಿಕ
ಮೇಲು ಮುನ್ನಲೇ ಹೊಲಗೇರಿಯೊಳು ಅಕ್ಕು[ಲ]ಜ ಹುಟ್ಟುವ
ಹನ್ನಿಬ್ಬರ ಬಾಯಿಗೆ ಮುಚ್ಚುಳ, ಮುಗಿದ ಕೈಯಿಕ್ಕುಳ
ತನ್ನ ತಾನರಿತ ಜ್ಞಾನಭರಿತನು ಜಗಭರಿತನ ಭಕ್ತ ಕಾಣಾ
ಎಲೆ ನಮ್ಮ ಕೂಡಲಚೆನ್ನಸಂಗಮದೇವಯ್ಯ.