ವೇದವೆಂಬುದು ವೇದ್ಯರಿಗಲ್ಲದೆ ಸಾಧ್ಯವಲ್ಲ.
ಅದೆಂತೆಂದಡೆ:
ಬಿಂದು ವ್ಯಂಜನ ಗುರು ಲಘು ಸಮಾಸ ವಿಭಕ್ತಿಯ ನೇಮ
ಬೀಜಾಕ್ಷರ ಐವತ್ತೆರಡರ ಭೇದದೊಳಗಲ್ಲದೆ,
ಇಂತಿವೆಲ್ಲವೂ ಒಂದರಲ್ಲಿ ಹುಟ್ಟಿ, ಒಂದರಲ್ಲಿ ಬೆಳೆದು,
ಒಂದರಲ್ಲಿ ಲಯವಹ ಕಾರಣ, ಇಂತೀ ವೇದಿಗಳೆಲ್ಲರೂ
ವೇದಾಂತ ಸಿದ್ಧಾಂತದನುವನರಿಯದೆ, ಯಾಗವ ಮಾಡಿಹೆವೆಂದು
ತಿಲ ಘೃತ ಸಮಿದೆ ಮೊದಲಾದ ಅಜಹತ ದಿಗ್ಭಂಧನಂಗಳಲ್ಲಿ
ಪ್ರವರ್ತನ ಗ್ರಹಂಗಳಲ್ಲಿ ಕರ್ಮವ ಮಾಡಿ, ಅಗ್ನಿಗಾಹುತಿ ಕೊಟ್ಟಲ್ಲಿ,
ಆತ ವೇದಾಂತನೆ ಬಲುರೋಗಾಂತನಲ್ಲದೆ?
ಇನ್ನು ವೇದಾಂತಸಿದ್ಧಿಯ ಕೇಳಿರೊ:
ಪೂರ್ವದಲ್ಲಿ ಹುಟ್ಟುವದನರಿದು, ಮಧ್ಯದಲ್ಲಿ ಬೆಳೆವುದ ನಿಧಾನಿಸಿ,
ಉತ್ತರದಲ್ಲಿ ಕಟ್ಟಕಡೆ ಎಂಬುದ ವಿಚಾರಿಸಿ ಲಕ್ಷಿಸಿ,
ಇಂತೀ ತ್ರಿವಿಧದ ಭೇದವ ಕಿತ್ತುಹಾಕಿ,
ಓಂ ಎಂಬ ಅರ್ಥವ ತಿಳಿದು, ನಯೆಂಬ ನಕಾರಮಂ ತಿಳಿದು,
ನಾನಾರೆಂಬುದ ಭಾವಿಸಿ, ಮಯೆಂಬ ಮದರೂಪಂ ವರ್ಜಿಸಿ,
ಶಿಯೆಂಬ ಶಿಕಾರವ ಸ್ವೀಕರಿಸಿ,
ಯಯೆಂಬ ಯಕಾರವ ನಾಲ್ಕರಲ್ಲಿ ಏಕೀಕರಿಸಿದ ಮತ್ತೆ,
ವೇದವೇದ್ಯನು ನೋಡಾ, ಲಲಾಮಭೀಮಸಂಗಮೇಶ್ವರಲಿಂಗವು.
Art
Manuscript
Music
Courtesy:
Transliteration
Vēdavembudu vēdyarigallade sādhyavalla.
Adentendaḍe:
Bindu vyan̄jana guru laghu samāsa vibhaktiya nēma
bījākṣara aivatteraḍara bhēdadoḷagallade,
intivellavū ondaralli huṭṭi, ondaralli beḷedu,
ondaralli layavaha kāraṇa, intī vēdigaḷellarū
vēdānta sid'dhāntadanuvanariyade, yāgava māḍ'̔ihevendu
tila ghr̥ta samide modalāda ajahata digbhandhanaṅgaḷalli
pravartana grahaṅgaḷalli karmava māḍi, agnigāhuti koṭṭalli,
āta vēdāntane balurōgāntanallade?
Innu vēdāntasid'dhiya kēḷiro:
Pūrvadalli huṭṭuvadanaridu, madhyadalli beḷevuda nidhānisi,
uttaradalli kaṭṭakaḍe embuda vicārisi lakṣisi,
intī trividhada bhēdava kittuhāki,
ōṁ emba arthava tiḷidu, nayemba nakāramaṁ tiḷidu,
nānārembuda bhāvisi, mayemba madarūpaṁ varjisi,
śiyemba śikārava svīkarisi,
yayemba yakārava nālkaralli ēkīkarisida matte,
vēdavēdyanu nōḍā, lalāmabhīmasaṅgamēśvaraliṅgavu.