Index   ವಚನ - 6    Search  
 
ನೀವು ನಿಮ್ಮ ಸ್ವಲೀಲೆಯಿಂದೆ ಜಗದ ಲೀಲಾ ವೈಭವಂಗಳ ನಟಿಸಬೇಕೆಂದು ನಿಮ್ಮಲ್ಲಿ ನೆನಹುದೋರಲು, ಆ ನೆನಹು ನಿರ್ಧರಿಸಿ, ಚಿತ್ತೆನಿಸಿತ್ತು. ಆ ಚಿತ್ತಿನಿಂದೆ ಚಿನ್ನಾದ ಚಿದ್ಬಿಂದು ಚಿತ್ಕಳೆಗಳೊಗೆದವು. ಆ ಚಿನ್ನಾದ ಚಿದ್ಬಿಂದು ಚಿತ್ಕಳೆ ಆ ಮೂಲಚಿತ್ತು ಸಹವಾಗಿ ಗಟ್ಟಿಗೊಂಡು ಅಖಂಡ ಗೋಳಕಾಕಾರ ತೇಜೋಮೂರ್ತಿಯಪ್ಪ ಮಹಾಲಿಂಗವಾಯಿತ್ತು. ಆ ಮಹಾಲಿಂಗವೇ ಪಂಚಮುಖವನೈದಿಹ ಸದಾಶಿವನೆಂದೆನಿಸಿತ್ತು. ಆ ಸದಾಶಿವನಿಂದೆ ಬ್ರಹ್ಮ-ವಿಷ್ಣು-ರುದ್ರರೆಂಬ ತ್ರೈಮೂರ್ತಿಗಳುದಿಸಿದರು. ಆ ತ್ರೈಮೂರ್ತಿಗಳಿಂದೆ ಸ್ವರ್ಗ-ಮರ್ತ್ಯ-ಪಾತಾಳಂಗಳೆಂಬ ತ್ರೈಲೋಕಂಗಳು ಜನಿಸಿದವು. ಆ ತ್ರೈಲೋಕಂಗಳ ಮಧ್ಯದಲ್ಲಿ ಸಚರಾಚರ ಹೆಣ್ಣುಗಂಡು ನಾಮ ರೂಪ ಕ್ರಿಯಾದಿ ಸಕಲ ವಿಸ್ತಾರವಾಯಿತ್ತು. ಇಂತಿವೆಲ್ಲವೂ ನಿಮ್ಮ ನೆನಹುಮಾತ್ರದಿಂದಾದವಯ್ಯ ಅಖಂಡೇಶ್ವರಾ.