Index   ವಚನ - 541    Search  
 
ಎನ್ನ ಪೃಥ್ವಿತತ್ತ್ವದಲ್ಲಿ ಆಧಾರಚಕ್ರವಿರ್ಪುದು. ಆ ಚಕ್ರವೇ ಭಕ್ತಸ್ಥಲ. ಆ ಸ್ಥಲವ ಬಸವಣ್ಣನಿಂಬುಗೊಂಡನಾಗಿ ಎನಗಾಸ್ಥಲ ಬಯಲಾಯಿತ್ತು. ಎನ್ನ ಅಪ್ಪುತತ್ತ್ವದಲ್ಲಿ ಸ್ವಾಧಿಷ್ಠಾನಚಕ್ರವಿರ್ಪುದು. ಆ ಚಕ್ರವೇ ಮಹೇಶ್ವರಸ್ಥಲ. ಆ ಸ್ಥಲವ ಮಡಿವಾಳಮಾಚಯ್ಯಗಳಿಂಬುಗೊಂಡರಾಗಿ ಎನಗಾಸ್ಥಲ ಬಯಲಾಯಿತ್ತು. ಎನ್ನ ಅಗ್ನಿತತ್ತ್ವದಲ್ಲಿ ಮಣಿಪೂರಕಚಕ್ರವಿರ್ಪುದು. ಆ ಚಕ್ರವೆ ಪ್ರಸಾದಿಸ್ಥಲ. ಆ ಸ್ಥಲವ ಚೆನ್ನಬಸವಣ್ಣನಿಂಬುಗೊಂಡನಾಗಿ ಎನಗಾಸ್ಥಲ ಬಯಲಾಯಿತ್ತು. ಎನ್ನ ವಾಯುತತ್ತ್ವದಲ್ಲಿ ಅನಾಹತಚಕ್ರವಿರ್ಪುದು. ಆ ಚಕ್ರವೆ ಪ್ರಾಣಲಿಂಗಿಸ್ಥಲ. ಆ ಸ್ಥಲವ ಸಿದ್ಧರಾಮಯ್ಯದೇವರಿಂಬುಗೊಂಡರಾಗಿ ಎನಗಾಸ್ಥಲ ಬಯಲಾಯಿತ್ತು. ಎನ್ನ ಗಗನತತ್ತ್ವದಲ್ಲಿ ವಿಶುದ್ಧಿಚಕ್ರವಿರ್ಪುದು. ಆ ಚಕ್ರವೆ ಶರಣಸ್ಥಲ. ಆ ಸ್ಥಲವ ಉರಿಲಿಂಗಪೆದ್ದಿದೇವರಿಂಬುಗೊಂಡರಾಗಿ ಎನಗಾಸ್ಥಲ ಬಯಲಾಯಿತ್ತು. ಎನ್ನ ಜೀವತತ್ತ್ವದಲ್ಲಿ ಆಜ್ಞಾನಚಕ್ರವಿರ್ಪುದು. ಆ ಚಕ್ರವೆ ಐಕ್ಯಸ್ಥಲ. ಆ ಸ್ಥಲವ ಅಜಗಣ್ಣತಂದೆಗಳಿಂಬುಗೊಂಡರಾಗಿ ಎನಗಾಸ್ಥಲ ಬಯಲಾಯಿತ್ತು. ಎನ್ನ ಬ್ರಹ್ಮಚಕ್ರವೆ ಪರಮ ಆರೂಢಸ್ಥಲ. ಆ ಸ್ಥಲವ ನಿಜಗುಣಯೋಗಿಗಳಿಂಬುಗೊಂಡರಾಗಿ ಎನಗಾಸ್ಥಲ ಬಯಲಾಯಿತ್ತು. ಎನ್ನ ಶಿಖಾಚಕ್ರವೆ ನಿತ್ಯನಿರುಪಮಸ್ಥಲ. ಆ ಸ್ಥಲವ ಅಕ್ಕಮಹದೇವಿಯರಿಂಬುಗೊಂಡರಾಗಿ ಎನಗಾಸ್ಥಲ ಬಯಲಾಯಿತ್ತು. ಎನ್ನ ಪಶ್ಚಿಮಚಕ್ರವೆ ಪರಮನಿರಂಜನಸ್ಥಲ. ಆ ಸ್ಥಲವ ಪ್ರಭುಸ್ವಾಮಿಗಳಿಂಬುಗೊಂಡರಾಗಿ ಎನಗಾಸ್ಥಲ ಬಯಲಾಯಿತ್ತು. ಎನ್ನ ಒಳಹೊರಗೆ ತೋರುವ ಎಲ್ಲ ಸ್ಥಳಕುಳಂಗಳನು ಉಳಿದ ಸಕಲಗಣಂಗಳು ಇಂಬುಗೊಂಡರಾಗಿ ಎನಗೆ ಎಲ್ಲ ಸ್ಥಲಂಗಳು ಬಯಲಾದುವು. ಇದು ಕಾರಣ, ಆದಿ ಅನಾದಿಯಿಂದತ್ತತ್ತಲಾದ ಘನಕೆ ಘನವಾದ ಮಹಕೆ ಮಹವಾದ ಮಹಾಸ್ಥಲವನಿಂಬುಗೊಂಡಿರಯ್ಯಾ ಎನಗೆ ಅಖಂಡೇಶ್ವರಾ.