ಮನವ ನಿಲಿಸಿಹೆನೆಂದು ನುಡಿವ ಅಣ್ಣಗಳ
ಕಣ್ಣಗೆಡಿಸಿ ಬಣ್ಣಗುಂದಿಸಿ ಬಂಧನಕ್ಕೊಳಗುಮಾಡಿ
ಭವದಲ್ಲಿ ಸೆರೆಹಿಡಿದಿರ್ಪುದು ನೋಡಾ ಮನವು.
ಅದೆಂತೆಂದೊಡೆ:
ವ್ರತವುಳ್ಳವರ ಭ್ರಾಂತುಗೆಡಿಸಿತ್ತು ನೋಡಾ ಮನವು.
ಯತಿಗಳೆಂಬವರ ಮತಿಹೀನರ ಮಾಡಿತ್ತು ನೋಡಾ ಮನವು.
ಕಣ್ಣುಮುಚ್ಚಿ ಧ್ಯಾನಿಸುವ ಅಣ್ಣಗಳ
ಕಳವಳಗೊಳಿಸಿತ್ತು ನೋಡಾ ಮನವು.
ಏಕಾಂತವಾಸಿಗಳೆಲ್ಲರ ಹಿಡಿತಂದು
ಲೋಕದ ಮಧ್ಯದೊಳಗಿರಿಸಿ
ಕಾಕುತನದಲ್ಲಿ ಕಾಡಿ ಏಡಿಸಿತ್ತು ನೋಡಾ ಮನವು.
ಯೋಗಿಗಳೆಂಬವರ ಭೋಗಕ್ಕೊಳಗುಮಾಡಿ
ಕಾಡಿತ್ತು ನೋಡಾ ಮನವು.
ಇಂತೀ ಮನವ ನಿಲಿಸಿಹೆವೆಂದು ನುಡಿದು
ಮತಿಗೆಟ್ಟು ಮಣ್ಣುಮಸಿಯಾಗಿ
ಹೋದರು ನೋಡಾ ಹಲಕೆಲಬರು.
ಅವರಂತಿರಲಿ.
ಇನ್ನು ಮನವ ನಿಲಿಸುವ ಭೇದವ ಹೇಳಿಹೆ ಕೇಳಿರೆ.
ಆದಿ-ಅನಾದಿ, ಸುರಾಳ-ನಿರಾಳ, ಶೂನ್ಯ-ನಿಃಶೂನ್ಯ,
ಸಾಕಾರ-ನಿರಾಕಾರ, ಸಗುಣ-ನಿರ್ಗುಣ,
ಮೂರ್ತಿ-ಅಮೂರ್ತಿ,
ಶಿವ-ಶಕ್ತಿ, ನಾಮ-ರೂಪು-ಕ್ರಿಯೆ
ಸಕಲ ಬ್ರಹ್ಮಾಂಡ ಸಚರಾಚರಾದಿ
ನಾನಾ ತೋರಿಕೆಯೆಲ್ಲವು ತಾನೆ ಎಂದು ತಿಳಿಯಲು
ಆ ತಿಳಿದಮಾತ್ರದಲ್ಲಿಯೆ ಮನದ ಕಲ್ಪಿತವಳಿದು
ಕಾಯಿ ಹಣ್ಣಾದಂತೆ,
ಆ ಮನವು ಮಹಾಘನಪರಬ್ರಹ್ಮವೆ ಅಪ್ಪುದು.
ಆ ಮನವು ಮಹಾಘನವಾದಲ್ಲಿಯೆ
ಶರಣನ ಹುಟ್ಟು ಹೊಂದು ನಷ್ಟವಾಗಿರ್ಪುದು.
ಆ ಶರಣನ ಹುಟ್ಟು ಹೊಂದು ನಷ್ಟವಾದಲ್ಲಿಯೆ
ಅಖಂಡೇಶ್ವರನೆಂಬ ಕುರುಹು ನಿರ್ವಯಲು ನೋಡಾ.
Art
Manuscript
Music
Courtesy:
Transliteration
Manava nilisihenendu nuḍiva aṇṇagaḷa
kaṇṇageḍisi baṇṇagundisi bandhanakkoḷagumāḍi
bhavadalli serehiḍidirpudu nōḍā manavu.
Adentendoḍe:
Vratavuḷḷavara bhrāntugeḍisittu nōḍā manavu.
Yatigaḷembavara matihīnara māḍittu nōḍā manavu.
Kaṇṇumucci dhyānisuva aṇṇagaḷa
kaḷavaḷagoḷisittu nōḍā manavu.
Ēkāntavāsigaḷellara hiḍitandu
lōkada madhyadoḷagirisi
kākutanadalli kāḍi ēḍisittu nōḍā manavu.
Yōgigaḷembavara bhōgakkoḷagumāḍi
kāḍittu nōḍā manavu.
Intī manava nilisihevendu nuḍidu
matigeṭṭu maṇṇumasiyāgi
hōdaru nōḍā halakelabaru.
Avarantirali.
Innu manava nilisuva bhēdava hēḷihe kēḷire.
Ādi-anādi, surāḷa-nirāḷa, śūn'ya-niḥśūn'ya,
sākāra-nirākāra, saguṇa-nirguṇa,
mūrti-amūrti,
śiva-śakti, nāma-rūpu-kriye
sakala brahmāṇḍa sacarācarādi
nānā tōrikeyellavu tāne endu tiḷiyalu
ā tiḷidamātradalliye manada kalpitavaḷidu
Kāyi haṇṇādante,
ā manavu mahāghanaparabrahmave appudu.
Ā manavu mahāghanavādalliye
śaraṇana huṭṭu hondu naṣṭavāgirpudu.
Ā śaraṇana huṭṭu hondu naṣṭavādalliye
akhaṇḍēśvaranemba kuruhu nirvayalu nōḍā.