Index   ವಚನ - 554    Search  
 
ಲಿಂಗದ ನಡೆಯಂತೆ ನಡೆವನಲ್ಲದೆ, ಲೋಕದ ನಡೆಯಂತೆ ನಡೆವನಲ್ಲ ನೋಡಾ ನಿಮ್ಮ ಶರಣ. ಲಿಂಗದ ನುಡಿಯಂತೆ ನುಡಿವನಲ್ಲದೆ, ಲೋಕದ ನುಡಿಯಂತೆ ನುಡಿವನಲ್ಲ ನೋಡಾ ನಿಮ್ಮ ಶರಣ. ಲಿಂಗದ ಮಚ್ಚಿನಲ್ಲಿ ಸುಳಿವನಲ್ಲದೆ, ಲೋಕದ ಮಚ್ಚಿನಲ್ಲಿ ಸುಳಿವನಲ್ಲ ನೋಡಾ ನಿಮ್ಮ ಶರಣ. ಲಿಂಗದ ವ್ಯವಹಾರದಲ್ಲಿರುತ್ತಿಹನಲ್ಲದೆ, ಲೋಕದ ವ್ಯವಹಾರದಲ್ಲಿರುತ್ತಿಹನಲ್ಲ ನೋಡಾ ನಿಮ್ಮ ಶರಣ. ಇಂತಪ್ಪ ಲಿಂಗಾಂಗಸಂಗಸಮರಸವನರಿದ ಶಿವಶರಣನ ಶಿವನೆನಬೇಕಲ್ಲದೆ, ಲೋಕದವರೆಂದು ನುಡಿವ ಸೂತಕದೇಹಿಗಳಿಗೆ ಪಾತಕ ತಪ್ಪದಯ್ಯಾ ಅಖಂಡೇಶ್ವರಾ.