Index   ವಚನ - 83    Search  
 
ಪರುಷಮೃಗ ಬಂದು ನಿಂದಲ್ಲಿ, ಜನ್ನ ಜಯವಾಗದೆ ಧರ್ಮಂಗೆ? ಲಿಂಗಜಂಗಮಭಕ್ತಿ ಪ್ರಜ್ವಲಿಸದೆ ಸಿರಿಯಾಳಂಗೆ? ಪ್ರಸಾದವ ಬಿಬ್ಬಿಬಾಚಯ್ಯ ಮೆರವುತ ಬಪ್ಪಲ್ಲಿ, ಅರಿಯದೆ ನಿಂದಿಸಿದಡೆ, ಹರಿದು ಹತ್ತದೆ ಉರಿಯ ನಾಲಗೆ ಗ್ರಾಮವ? ಹರನಿತ್ತ ನಿರೂಪವಿಡಿ ಮಾರ್ಗದಲ್ಲಿ ಮಾರಾರಿಯ ಶರಣರು ಬಂದು ನಿಂದಲ್ಲಿ ಅರ್ಧಗೃಹಂಗಳುಳಿಯವೆ? ಸದ್ಯೋಜಾತನ ಶರಣರ ಧರೆಯನುರಿಯ ನಾಲಗೆಯ ನೀಡಿ, ಕಲ್ಯಾಣವನಾಳುವ ಬಿಜ್ಜಳನ ಮುಟ್ಟಿನಿಂದಡೆ, ಹೋ ಹೋ! ಇದ್ದಂತೆ ಬರಬೇಕೆಂದಡೆ, ಕೋಪಾಟೋಪವಂ ಬಿಟ್ಟು ಕಳದು, ಸಾಮಾನ್ಯವಾಗದೆ? ಶಿವನೊಲಿದ ಸಿದ್ಧರಿಗೆ ಅಂಗದ ಮೇಲೆ ಲಿಂಗವವಿಲ್ಲದವನು ಅಂಗಳವನು ಮೆಟ್ಟಲಾಗದೆಂದಡೆ, ಉರಿಯ ಜ್ವಾಲೆಯ ಬಿಟ್ಟಡೆ, ಪರಿಹರಿಸದೆ ಕುಂಚಿಗೆಯ ತುದಿಯಲ್ಲಿ? ಪರಮನೊಲಿದ ಶರಣರು ಸ್ವತಂತ್ರಮಹಿಮರು. ಅದಂತೆಂದಡೆ: ಅವರೆಂದಂತೆ ಅಹುದೆಂದಡೆ, ಅಂಗದ ಮೇಲೆ ಲಿಂಗಪ್ರತಿಷ್ಠೆಯಾಗದೆ, ಶಿವಯೋಗಿ ಸಿದ್ಧರಾಮಯ್ಯಂಗೆ ಸಕಲಧೂರ್ತದುರಿತಂಗಳು ಬಿಟ್ಟೋಡುತ್ತಿದ್ದವು, ಸಕಳೇಶ್ವರದೇವಾ, ನಿಮ್ಮ ಶರಣನ ದೇವತ್ವಕ್ಕಂಜಿ.